ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನ : ಸಿಎಂ, ಡಿಸಿಎಂ ಸಂತಾಪ

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ (95) ನಿಧನ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರಿಂದ ಸಂತಾಪ.

Dec 14, 2025 - 22:57
Dec 14, 2025 - 23:01
 0
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನ : ಸಿಎಂ, ಡಿಸಿಎಂ ಸಂತಾಪ


ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಂಗಳೂರು: ದೇಶದ ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (95) ಅವರು ಇಂದು ಸಂಜೆ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸುದೀರ್ಘ ರಾಜಕೀಯ ಪಯಣ

ಜೂನ್ 16, 1931ರಂದು ದಾವಣಗೆರೆ ತಾಲೂಕಿನ ಶಾಮನೂರು ಗ್ರಾಮದಲ್ಲಿ ಜನಿಸಿದ್ದ ಶಾಮನೂರು ಶಿವಶಂಕರಪ್ಪ ಅವರು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿ, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸಮಾಜದ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು.

ಅಂತಿಮ ದರ್ಶನಕ್ಕೆ ಸಿದ್ಧತೆ

ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಬಳ್ಳಾರಿ ರಸ್ತೆಯ ಪ್ಯಾಲೇಸ್ ಗ್ರೌಂಡ್ ಎದುರಿನಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮುಖ್ಯ ಕಚೇರಿಗೆ ಕೊಂಡೊಯ್ಯಲು ಸಿದ್ಧತೆ ನಡೆಯುತ್ತಿದೆ.

ಸ್ಪರ್ಶ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಮಹಾಸಭಾ ಕಚೇರಿಗೆ ಶಿಫ್ಟ್ ಮಾಡಲಾಗಲಿದ್ದು, ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಪಾರ್ಥಿವ ಶರೀರವನ್ನು ದಾವಣಗೆರೆಗೆ ರವಾನಿಸಲಾಗುತ್ತದೆ ಎಂದು ಮಹಾಸಭಾ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಮಾಜಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ಅವರ ನಿಧನ ಸುದ್ದಿ ನೋವುಂಟುಮಾಡಿದೆ. ಅಪವಾದಗಳಿಂದ ದೂರವಿದ್ದು, ಜನಕಲ್ಯಾಣಕ್ಕಾಗಿ ಅಧಿಕಾರವನ್ನು ಬಳಸಿದ ಮುತ್ಸದ್ದಿ ನಾಯಕನ ಅಗಲಿಕೆಯಿಂದ ಸಮಾಜ ಬಡವಾಗಿದೆ.

ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಲು ಅವರು ಸಲ್ಲಿಸಿದ ಸೇವೆಗಳು ಚಿರಸ್ಥಾಯಿಯಾಗಿವೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ

ಸಮಾಜ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ನಾಡಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಕುಟುಂಬ ವರ್ಗ ಹಾಗೂ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಕ್ಸ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಈಶ್ವರ ಖಂಡ್ರೆ ಸಂತಾಪ

ವೀರಶೈವ ಲಿಂಗಾಯತ ಸಮಾಜದ ಗಣ್ಯ ನಾಯಕ ಹಾಗೂ ಮಾರ್ಗದರ್ಶಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಒಬ್ಬ ಶ್ರೇಷ್ಠ ಮುತ್ಸದ್ದಿಯನ್ನು ಕಳೆದುಕೊಂಡಿದ್ದೇವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಶೋಕ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯನ್ನು ‘ಕರ್ನಾಟಕದ ಮ್ಯಾಂಚೆಸ್ಟರ್’ ಆಗಿಸಲು ಅವರು ಕೈಗೊಂಡ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳು ಅನನ್ಯವಾಗಿವೆ ಎಂದು ಸ್ಮರಿಸಿದ್ದಾರೆ.