ರಾಜ್ಯದಲ್ಲಿ ಕಂಗೆಡಿಸುವ ಮಕ್ಕಳ ಅಪಹರಣ ಪ್ರಕರಣಗಳು: ಮೂರು ವರ್ಷಗಳಲ್ಲಿ 9,639 ಮಕ್ಕಳ ಅಪಹರಣ

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 9,639 ಮಕ್ಕಳ ಅಪಹರಣ ಪ್ರಕರಣಗಳು ವರದಿಯಾಗಿದ್ದು, 71.5 ಶೇಕಡಾ ಪ್ರಕರಣಗಳು ಬಾಲಕಿಯರದ್ದಾಗಿರುವುದು ಆತಂಕಕಾರಿ ಅಂಶವಾಗಿದೆ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಪೊಲೀಸ್ ಇಲಾಖೆ, ಪೋಷಕರು ಹಾಗೂ ಸಮಾಜ ಒಟ್ಟಾಗಿ ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ.

Dec 14, 2025 - 16:06
Dec 14, 2025 - 16:14
 0
ರಾಜ್ಯದಲ್ಲಿ ಕಂಗೆಡಿಸುವ ಮಕ್ಕಳ ಅಪಹರಣ ಪ್ರಕರಣಗಳು: ಮೂರು ವರ್ಷಗಳಲ್ಲಿ 9,639 ಮಕ್ಕಳ ಅಪಹರಣ


ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಂಗಳೂರು: ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೂ ಮಕ್ಕಳ ಅಪಹರಣ ಪ್ರಕರಣಗಳು ರಾಜ್ಯವನ್ನು ಕಂಗೆಡಿಸುವಂತಿವೆ. ಮಕ್ಕಳ ಸುರಕ್ಷತೆ ಕುರಿತು ಇನ್ನಷ್ಟು ಎಚ್ಚರಿಕೆ ಮತ್ತು ಸಮಗ್ರ ಕ್ರಮಗಳ ಅಗತ್ಯತೆ ಸ್ಪಷ್ಟವಾಗಿ ಕಂಡುಬರುತ್ತಿದೆ.

ಮಕ್ಕಳ ಅಪಹರಣ ಪ್ರಕರಣಗಳಿಗೆ ಕೇವಲ ಪೊಲೀಸರನ್ನೇ ಹೊಣೆ ಮಾಡಲಾಗದು. ಇದರಲ್ಲಿ ಪೋಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಮೇಲೆ ನಿರಂತರ ನಿಗಾ ವಹಿಸುವುದು, ಜಾಗರೂಕತೆಯಿಂದ ನೋಡಿಕೊಳ್ಳುವುದು ಅನಿವಾರ್ಯ. ರಾಜ್ಯದ ಪ್ರತಿಯೊಂದು ಪೊಲೀಸ್‌ ಠಾಣೆಯಲ್ಲೂ ವಿಶೇಷ ಬಾಲ ಪೊಲೀಸ್‌ ಘಟಕ ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿ ಇದ್ದರೂ, ಅಪಹರಣ ಅಥವಾ ನಾಪತ್ತೆಯಾದ ಮಕ್ಕಳ ಪತ್ತೆ ಕಾರ್ಯವು ಪೊಲೀಸರ ಜವಾಬ್ದಾರಿಯಷ್ಟೇ ಅಲ್ಲ. ಸಮುದಾಯ ಹಾಗೂ ಪೋಷಕರ ಸಹಕಾರವೂ ಅತ್ಯವಶ್ಯಕವಾಗಿದೆ.

9,639 ಮಕ್ಕಳ ಅಪಹರಣ

ಕಳೆದ ಮೂರು ವರ್ಷಗಳಲ್ಲಿ (2023, 2024 ಹಾಗೂ 2025ರ ನವೆಂಬರ್‌ 15ರವರೆಗೆ) ರಾಜ್ಯದಲ್ಲಿ ಒಟ್ಟು 9,639 ಮಕ್ಕಳು ಅಪಹರಣಕ್ಕೊಳಗಾಗಿರುವುದಾಗಿ ಗೃಹ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ.

2023ರಲ್ಲಿ 3,039 ಮಕ್ಕಳು, 2024ರಲ್ಲಿ 3,411 ಮಕ್ಕಳು ಹಾಗೂ 2025ರಲ್ಲಿ ಇದುವರೆಗೆ 3,189 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ.

6,891 ಬಾಲಕಿಯರ ಅಪಹರಣ

ಮೂರು ವರ್ಷಗಳ ಅವಧಿಯಲ್ಲಿ ಅಪಹರಣ ಮತ್ತು ನಾಪತ್ತೆಯಾದ ಮಕ್ಕಳ ಪೈಕಿ ಹೆಣ್ಣುಮಕ್ಕಳ ಪ್ರಮಾಣವೇ ಹೆಚ್ಚಿರುವುದು ಆತಂಕಕಾರಿ ಅಂಶವಾಗಿದೆ. ಈ ಅವಧಿಯಲ್ಲಿ 6,891 ಬಾಲಕಿಯರು ಅಪಹರಣ ಅಥವಾ ನಾಪತ್ತೆಯಾಗಿದ್ದಾರೆ. ಇದು ಒಟ್ಟಾರೆ ಮಕ್ಕಳ ಅಪಹರಣಗಳಲ್ಲಿ ಶೇ.71.50ರಷ್ಟು. ಉಳಿದಂತೆ 2,748 ಗಂಡು ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ವರ್ಷವಾರು ವಿವರ

2023: ಒಟ್ಟು 3,039 ಪ್ರಕರಣಗಳು – 2,131 ಬಾಲಕಿಯರು, 903 ಗಂಡು ಮಕ್ಕಳು

2024: ಒಟ್ಟು 3,411 ಪ್ರಕರಣಗಳು – 2,436 ಬಾಲಕಿಯರು, 975 ಗಂಡು ಮಕ್ಕಳು

2025 (ನ.15ರವರೆಗೆ): ಒಟ್ಟು 3,189 ಪ್ರಕರಣಗಳು – 2,324 ಬಾಲಕಿಯರು, 865 ಗಂಡು ಮಕ್ಕಳು

ಪತ್ತೆಯಾದ–ಪತ್ತೆಯಾಗದ ಪ್ರಕರಣಗಳು

2023ರಲ್ಲಿ ಅಪಹರಣಗೊಂಡ 908 ಗಂಡು ಮಕ್ಕಳ ಪೈಕಿ 873 ಪತ್ತೆಯಾಗಿದ್ದು, 35 ಪ್ರಕರಣಗಳು ಇನ್ನೂ ಬಾಕಿಯಿವೆ. 2,131 ಬಾಲಕಿಯರ ಪೈಕಿ 2,089 ಪತ್ತೆಯಾಗಿದ್ದು, 42 ಪ್ರಕರಣಗಳು ಪತ್ತೆಯಾಗಿಲ್ಲ.

2024ರಲ್ಲಿ ಅಪಹರಣಗೊಂಡ 975 ಗಂಡು ಮಕ್ಕಳಲ್ಲಿ 930 ಪತ್ತೆಯಾಗಿದ್ದು, 45 ಇನ್ನೂ ಪತ್ತೆಯಾಗಿಲ್ಲ. ಅದೇ ರೀತಿ 2,436 ಬಾಲಕಿಯರ ಪೈಕಿ 2,336 ಪತ್ತೆಯಾಗಿದ್ದು, 100 ಬಾಲಕಿಯರು ಇನ್ನೂ ಕಾಣೆಯಾಗಿದ್ದಾರೆ.

2025ರ ನವೆಂಬರ್‌ 15ರವರೆಗೆ ಅಪಹರಣಗೊಂಡ 865 ಗಂಡು ಮಕ್ಕಳಲ್ಲಿ 676 ಪತ್ತೆಯಾಗಿದ್ದು, 189 ಇನ್ನೂ ಪತ್ತೆಯಾಗಿಲ್ಲ. 2,324 ಬಾಲಕಿಯರ ಪೈಕಿ 1,641 ಪತ್ತೆಯಾಗಿದ್ದು, 683 ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ ಎಂಬ ಆತಂಕಕಾರಿ ಅಂಕಿ-ಅಂಶಗಳು ಲಭ್ಯವಾಗಿವೆ.

ಬೆಂಗಳೂರು ನಗರದಲ್ಲೇ ಹೆಚ್ಚು ಪ್ರಕರಣ

ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ 3,268 ಮಕ್ಕಳ ಅಪಹರಣ ವರದಿಯಾಗಿದ್ದು, ಇದರಲ್ಲಿ 2,290 ಹೆಣ್ಣು ಮಕ್ಕಳು ಸೇರಿದ್ದಾರೆ. ರಾಜ್ಯದಲ್ಲಿ ವರದಿಯಾದ ಒಟ್ಟು ಮಕ್ಕಳ ಅಪಹರಣಗಳಲ್ಲಿ ಶೇ.24ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ನಡೆದಿವೆ.

ಬೆಂಗಳೂರು ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 694 ಮಕ್ಕಳ ಅಪಹರಣವಾಗಿದ್ದು, ಇವರಲ್ಲಿ 493 ಬಾಲಕಿಯರು. ತುಮಕೂರು ಜಿಲ್ಲೆಯಲ್ಲಿ 450 ಪ್ರಕರಣಗಳು (361 ಬಾಲಕಿಯರು), ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯಲ್ಲಿ 305 ಪ್ರಕರಣಗಳು (226 ಬಾಲಕಿಯರು) ವರದಿಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ 301 (212 ಬಾಲಕಿಯರು), ಶಿವಮೊಗ್ಗದಲ್ಲಿ 297 (216 ಬಾಲಕಿಯರು), ಮಂಡ್ಯದಲ್ಲಿ 283 (186 ಬಾಲಕಿಯರು), ಹಾಸನದಲ್ಲಿ 264 (192 ಬಾಲಕಿಯರು) ಹಾಗೂ ಚಿತ್ರದುರ್ಗದಲ್ಲಿ 244 ಮಕ್ಕಳ ಅಪಹರಣ ಪ್ರಕರಣಗಳು ವರದಿಯಾಗಿದ್ದು, ಬಹುಪಾಲು ಪ್ರಕರಣಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚು ಕಿಡ್ನಾಪ್‌ ಆಗಿರುವುದು ಗಂಭೀರ ಚಿಂತೆಯ ವಿಷಯವಾಗಿದೆ.

ಮಕ್ಕಳ ಸುರಕ್ಷತೆ ವಿಚಾರದಲ್ಲಿ ಸರ್ಕಾರ, ಪೊಲೀಸ್ ಇಲಾಖೆ, ಪೋಷಕರು ಹಾಗೂ ಸಮಾಜ ಒಟ್ಟಾಗಿ ಹೊಣೆ ಹೊತ್ತು ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಈ ಅಂಕಿ-ಅಂಶಗಳಿಂದ ಮತ್ತಷ್ಟು ಸ್ಪಷ್ಟವಾಗಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.