ಲ್ಯಾಂಡ್ ಲಾರ್ಡ್ ಸಿನಿಮಾದ ನಿಂಗವ್ವ…ನಿಂಗವ್ವ... ಹಾಡಿಗೆ ಜನಮೆಚ್ಚುಗೆ
ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಲ್ಯಾಂಡ್‌ಲಾರ್ಡ್ ಚಿತ್ರದ ಮೊದಲ ವಿಡಿಯೋ ಸಾಂಗ್ ‘ನಿಂಗವ್ವ ನಿಂಗವ್ವ’ ಬಿಡುಗಡೆಯಾಗಿದೆ. 80ರ ದಶಕದ ಹಳ್ಳಿ ಸೊಗಡನ್ನು ಪ್ರತಿಬಿಂಬಿಸುವ ಈ ಹಾಡಿನಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಜೋಡಿ ಮತ್ತು ಕೆಮಿಸ್ಟ್ರಿ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಜಯ್ ಪ್ರಕಾಶ್ ಅವರ ಧ್ವನಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯೊಂದಿಗೆ ಹಾಡು ಮನಮುಟ್ಟುವಂತೆ ಮೂಡಿಬಂದಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ‘ಲ್ಯಾಂಡ್‌ಲಾರ್ಡ್’ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡಿತ್ತು.
ಇದೀಗ ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ. ಹಂಪಿ ನಿರ್ದೇಶನ ಮಾಡಿದ್ದಾರೆ. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೊಂದಿರುವ ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ನಾಯಕ ನಟ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲ ಹಾಡು ಕೂಡ ಆ ಕಾಲಘಟ್ಟದ ಹಳ್ಳಿ ಸೊಗಡನ್ನು ಜೀವಂತವಾಗಿ ಹಿಡಿದಿಟ್ಟಿದೆ.
‘ನಿಂಗವ್ವ ನಿಂಗವ್ವ’ ಎನ್ನುವ ಈ ಹಾಡು ಹಳ್ಳಿ ಪ್ರೀತಿಯ ಸೊಗಡಿನ ಹಾಡಾಗಿದ್ದು, ರಚಿತಾ ರಾಮ್ ‘ನಿಂಗವ್ವ’ ಪಾತ್ರದಲ್ಲಿ, ದುನಿಯಾ ವಿಜಯ್ ‘ರಾಚಯ್ಯ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಪರದೆ ಮೇಲೆ ಮಂತ್ರಮುಗ್ಧಗೊಳಿಸುವಂತಿದೆ. ಹಾಡಿನಲ್ಲಿನ ಹಳ್ಳಿ ಬದುಕಿನ ದೃಶ್ಯಗಳು ಹಾಗೂ ದುನಿಯಾ ವಿಜಯ್–ರಚಿತಾ ರಾಮ್ ಅವರ ಕೆಮಿಸ್ಟ್ರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವ ನಿರೀಕ್ಷೆ ಇದೆ.
ಗಾಯಕ ವಿಜಯ್ ಪ್ರಕಾಶ್ ಅವರ ಮಧುರ ಧ್ವನಿಯಲ್ಲಿ ಹಾಡು ಇನ್ನಷ್ಟು ಮನಮುಟ್ಟುವಂತೆ ಮೂಡಿಬಂದಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತಕ್ಕೆ ಈ ಹಾಡು ಹೊಸ ಆಯಾಮ ನೀಡಿದೆ.
ಸಾಂಗ್ ರೆಕಾರ್ಡಿಂಗ್‌ಗೆ ವಿಶೇಷ ಶ್ರಮ
‘ನಿಂಗವ್ವ’ ಹಾಡು ಬಿಡುಗಡೆಯಕ್ಕೂ ಮುನ್ನ ಸಾಂಗ್ ರೆಕಾರ್ಡಿಂಗ್ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿತ್ತು. ಅದರಲ್ಲಿ ಗಾಯಕ ವಿಜಯ್ ಪ್ರಕಾಶ್, ಗಾಯಕಿ ಅನನ್ಯ ಭಟ್, ನಿರ್ದೇಶಕ ಜಡೇಶ್ ಹಂಪಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಭಾಗಿಯಾಗಿದ್ದರು.
ಈ ಹಾಡಿಗಾಗಿ ಅಜನೀಶ್ ಲೋಕನಾಥ್ ಒಂದು ವಾರ ಮುಂಚೆಯೇ ಟ್ಯೂನ್ ನೀಡಿದ್ದರೂ, ನಿರ್ದೇಶಕ ಜಡೇಶ್ ಹಂಪಿ ಸಂಪೂರ್ಣ ತೃಪ್ತಿಯಾಗುವವರೆಗೂ ಹಾಡನ್ನು ಮತ್ತೆ ಮತ್ತೆ ರೆಕಾರ್ಡ್ ಮಾಡಿಸಿದ್ದಾರೆ.
ಮಧ್ಯರಾತ್ರಿ 2 ಗಂಟೆವರೆಗೂ ವಿಜಯ್ ಪ್ರಕಾಶ್ ಮತ್ತು ಅನನ್ಯ ಭಟ್ ಅವರಿಂದ ಪುನಃ ಪುನಃ ಹಾಡಿಸಿದ ಘಟನೆ ಚಿತ್ರದ ಮೇಲಿನ ತಂಡದ ಶ್ರಮವನ್ನು ತೋರಿಸುತ್ತದೆ.


