ಮಗನನ್ನೇ ಕೊಂದ ಪಾಪಿ ತಂದೆ : ಕೃಷ್ಣಾ ನದಿಗೆ ಮಗ ಎಸೆದು ಹತ್ಯೆ
ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ಸ್ನೇಹಿತರ ಚುಚ್ಚು ಮಾತಿನಿಂದ ಬೇಸತ್ತ ತಂದೆ ಮಲ್ಲಿಕಾರ್ಜುನ ಅರಕೇರಿ, ತನ್ನ ಆರು ವರ್ಷದ ಮಗನನ್ನು ಮಹಾರಾಷ್ಟ್ರದ ಕರಾಡ್ ಬಳಿ ಕೃಷ್ಣಾ ನದಿಗೆ ಎಸೆದು ಹತ್ಯೆ ಮಾಡಿದ್ದಾನೆ. ಕೋಚಿಂಗ್ ನೆಪದಲ್ಲಿ ಮಗನನ್ನು ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ. ಪ್ರಕರಣ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ: ‘ಹೋಲಿಕೆಯಲ್ಲಿ ನಿನ್ನ ಮಗ ನಿನ್ನಂತೆ ಕಾಣುತ್ತಿಲ್ಲ’ ಎಂಬ ಸ್ನೇಹಿತರ ಚುಚ್ಚು ಮಾತಿಗೆ ಬೇಸತ್ತು ತಂದೆಯೇ ತನ್ನ ಮಗನನ್ನು ಕೃಷ್ಣಾ ನದಿಗೆ ಎಸೆದು ಹತ್ಯೆ ಮಾಡಿದ ದಾರುಣ ಘಟನೆ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಆರು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದಲ್ಲಿ ಮಲ್ಲಿಕಾರ್ಜುನ ಅರಕೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮಲ್ಲಿಕಾರ್ಜುನನಿಗೆ ಕೆಲವರು ‘ನಿನ್ನ ಮಗ ನಿನ್ನಂತೆ ಕಾಣುತ್ತಿಲ್ಲ’ ಎಂದು ಪದೇಪದೇ ಚೇಡಿಸುತ್ತಿದ್ದರು. ಇದೇ ವಿಚಾರದಿಂದ ಬೇಸತ್ತು ತನ್ನ ಮಗನನ್ನೇ ಕೊಲ್ಲಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.
ಮಾರ್ಚ್ 16ರಂದು ಮಗನನ್ನು ಕೋಚಿಂಗ್ ಸೆಂಟರ್‌ಗೆ ಸೇರಿಸುವ ನೆಪದಲ್ಲಿ ಸಿಂದಗಿಗೆ ಕರೆದುಕೊಂಡು ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದ ಮಲ್ಲಿಕಾರ್ಜುನ, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ಬಳಿ ಕೃಷ್ಣಾ ನದಿಗೆ ಮಗನನ್ನು ತಳ್ಳಿ ಕೊಲೆ ಮಾಡಿ ವಾಪಸ್ ಬಂದಿದ್ದಾನೆ. ಬಳಿಕ ಏನೂ ಆಗಿಲ್ಲವೆಂಬಂತೆ ನಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಬಾಲಕನ ತಾಯಿ ಭಾಗ್ಯಶ್ರೀ ಹಾಗೂ ಅಜ್ಜಿ ಸುಮಿತ್ರಾ ಕಣ್ಣೀರಿಟ್ಟು ಮಾತನಾಡಿ, ಮಗನೊಂದಿಗೆ ಮಾತನಾಡಿಸಬೇಕೆಂದು ಕೇಳಿದಾಗ ಗಂಡ ಮತ್ತೊಬ್ಬರಿಗೆ ಕರೆ ಮಾಡಿ ‘ಮಗ ಆಟದಲ್ಲಿ ಬ್ಯುಸಿ ಇದ್ದಾನೆ’ ಎಂದು ಹೇಳಿಸಿದ್ದ. ನಂತರ ಮಗನನ್ನು ತೋರಿಸುವುದಾಗಿ ಹೇಳಿ ಸಿಂದಗಿಗೆ ಕರೆದುಕೊಂಡು ಹೋಗಿ ದಿನವಿಡೀ ತಿರುಗಿಸಿ ಮಗನನ್ನು ತೋರಿಸದೇ ಹಿಂದಿರುಗಿದ್ದ ಎಂದು ಆರೋಪಿಸಿದರು.
ಇದೇ ವೇಳೆ ಸತಾರಾ ಪೊಲೀಸರು ಕೃಷ್ಣಾ ನದಿಯಲ್ಲಿ ಪತ್ತೆಯಾದ ಅಪರಿಚಿತ ಬಾಲಕನ ಮೃತದೇಹದ ಕುರಿತು ಪ್ರಕಟಣೆ ಹೊರಡಿಸಿದ್ದರು. ನಂತರ ಮಗ ಹಾಗೂ ತಂದೆ ಕಾಣೆಯಾಗಿರುವ ಕುರಿತು ಭಾಗ್ಯಶ್ರೀ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮಗನನ್ನು ನದಿಗೆ ಎಸೆದು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಮಗನನ್ನೇ ಕೊಂದ ಈ ಅಮಾನವೀಯ ಕೃತ್ಯಕ್ಕೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


