ಆಕಾಶವಾಣಿಯ ಅರೆಕಾಲಿಕ ಪ್ರತಿನಿಧಿ, ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ನಿಧನ

ಬೆಳಗಾವಿ ವಿಧಾನಮಂಡಲ ಅಧಿವೇಶನ ವರದಿ ಕರ್ತವ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಹಿರಿಯ ಪತ್ರಕರ್ತ ಹಾಗೂ ಆಕಾಶವಾಣಿಯ ಅರೆಕಾಲಿಕ ಪ್ರತಿನಿಧಿ ದೊಡ್ಡಬೊಮ್ಮಯ್ಯ (63) ಅವರು ಶನಿವಾರ ಬೆಳಿಗ್ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಹಠಾತ್ ಹೃದಯಾಘಾತದಿಂದ ನಿಧನರಾದರು. ಅವರ ಅಗಲಿಕೆಗೆ ಪತ್ರಿಕೋದ್ಯಮ ವಲಯ ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

Dec 20, 2025 - 10:58
Dec 20, 2025 - 11:09
 0
ಆಕಾಶವಾಣಿಯ ಅರೆಕಾಲಿಕ ಪ್ರತಿನಿಧಿ, ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ನಿಧನ


ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಳಗಾವಿ ಅಧಿವೇಶನಕ್ಕೆ ಬಂದಿದ್ದ ಹಿರಿಯ ಪತ್ರಕರ್ತ

•ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ

•ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ

•ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ ಹಿರಿಯ ಪತ್ರಕರ್ತ

•ದೊಡ್ಡಬೊಮ್ಮಯ್ಯ ನಿಧನಕ್ಕೆ ಗಣ್ಯರಿಂದ ಸಂತಾಪ


ಬೆಂಗಳೂರು:
ಆಕಾಶವಾಣಿಯ ಅರೆಕಾಲಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಹಿರಿಯ ಪತ್ರಕರ್ತರಾದ ದೊಡ್ಡಬೊಮ್ಮಯ್ಯ (63) ಅವರು ಹಠಾತ್ ಹೃದಯಾಘಾತದಿಂದ ಶನಿವಾರ (ಡಿಸೆಂಬರ್ 20) ಬೆಳಿಗ್ಗೆ ನಿಧನರಾದರು.

ಬೆಳಗಾವಿ ವಿಧಾನಮಂಡಲ ಅಧಿವೇಶನದ ವರದಿ ಕರ್ತವ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು, ಇಂದು ಬೆಳಿಗ್ಗೆ ಮೆಜೆಸ್ಟಿಕ್‌ಗೆ ತಲುಪಿ ಅಲ್ಲಿಂದ ಯಲಹಂಕ ಕಡೆಗೆ ತೆರಳಲು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪತ್ರಿಕೋದ್ಯಮ ವಲಯದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಅನೇಕ ಗಣ್ಯರು, ಹಿರಿಯ ಪತ್ರಕರ್ತರು ಹಾಗೂ ಸಹೋದ್ಯೋಗಿಗಳು ದೊಡ್ಡಬೊಮ್ಮಯ್ಯ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಅವರು ಸ್ಮರಿಸಿದ್ದಾರೆ.

ಪತ್ರಕರ್ತರ ಸೊಸೈಟಿ ನಿರ್ದೇಶಕರಾದ ಸಂಜೆ ವಾಣಿ ದೊಡ್ಡಬೊಮ್ಮಯ್ಯ ಅವರು ನಿಧನರಾಗಿದ್ದು, ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ-ಬೆಂಗಳೂರು ಬಳಗದಿಂದ ಸಂತಾಪಗಳು.

ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ದೊಡ್ಡ ಬೊಮ್ಮಯ್ಯ ಪತ್ರಕರ್ತ ವಲಯದಲ್ಲಿ ಸ್ನೇಹಜೀವಿ ಎಂದೇ ಗುರುತಿಸಿಕೊಂಡಿದ್ದರು. ದೂರದರ್ಶನ ಚಂದನವಾಹಿನಿಯಲ್ಲೂ ಅವರು ಕೆಲಸ ಮಾಡಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮುಂದಿನ ಅಂತ್ಯಕ್ರಿಯೆಯ ವಿವರಗಳನ್ನು ಕುಟುಂಬದವರು ತಿಳಿಸಲಿದ್ದಾರೆ.