ಪೊಲೀಸ್ ಯೂನಿಫಾರಂ ಧರಿಸಿ ವಂಚನೆ: ನಕಲಿ ಪಿಎಸ್‌ಐ ಸೇರಿ ನಾಲ್ವರು ಅರೆಸ್ಟ್
ಪೊಲೀಸ್ ಯೂನಿಫಾರಂ ಧರಿಸಿ ತಾನು ಪಿಎಸ್‌ಐ ಎಂದು ನಂಬಿಸಿ ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಿಂದ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಯೂನಿಫಾರಂ ಧರಿಸಿ ತಾನು ರಿಯಲ್ ಪೊಲೀಸ್ ಎಂದು ಬಿಲ್ಡಪ್ ಕೊಟ್ಟು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ (Fake PSI) ಸೇರಿ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಲ್ಲಿಕಾರ್ಜುನ, ಪ್ರಮೋದ್, ವಿನಯ್ ಹಾಗೂ ಹೃತ್ವಿಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಪೂರ್ವಯೋಜನೆ ರೂಪಿಸಿಕೊಂಡು ಮನೆಗೆ ನುಗ್ಗಿ, ಪೊಲೀಸ್ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ದೋಚುತ್ತಿದ್ದುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುಖ್ಯ ಆರೋಪಿ ಮಲ್ಲಿಕಾರ್ಜುನ ಪಿಎಸ್‌ಐ ಆಗುವ ಕನಸಿನಲ್ಲಿ ಎರಡು ಬಾರಿ ಪರೀಕ್ಷೆ ಬರೆದಿದ್ದರೂ ಎರಡೂ ಬಾರಿ ವಿಫಲವಾಗಿದ್ದ. ಆದರೂ ತಾನು ಪರೀಕ್ಷೆ ಪಾಸ್ ಆಗಿ ಬೆಂಗಳೂರಿನಲ್ಲಿ ಪಿಎಸ್‌ಐ ಆಗಿದ್ದೇನೆ ಎಂದು ಸ್ವಂತ ಊರು ಸಿರಗುಪ್ಪ ಸೇರಿದಂತೆ ಹಲವೆಡೆ ಬಿಂಬಿಸಿದ್ದ. ಪೊಲೀಸ್ ಯೂನಿಫಾರಂ, ಲಾಠಿ, ಟೋಪಿ, ಶೂ ಧರಿಸಿ ಫೋಟೋಶೂಟ್ ಕೂಡ ಮಾಡಿಸಿಕೊಂಡು ಜನರಲ್ಲಿ ನಂಬಿಕೆ ಹುಟ್ಟಿಸಿದ್ದಾನೆ.
ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಲ್ಲಿಕಾರ್ಜುನ ಅಡ್ಡದಾರಿ ಹಿಡಿದಿದ್ದು, ಇದಕ್ಕೆ ಎ4 ಆರೋಪಿ ಹೃತ್ವಿಕ್ ಸಾಥ್ ನೀಡಿದ್ದಾನೆ. ಹೃತ್ವಿಕ್ ನವೀನ್ ಎಂಬ ವ್ಯಕ್ತಿಯ ಚಲನವಲನಗಳನ್ನು ಗಮನಿಸಿ, ಅವರ ಮನೆಗೆ ನುಗ್ಗಿದರೆ ಹಣ ಹಾಗೂ ಚಿನ್ನಾಭರಣ ಸಿಗುವ ಸಾಧ್ಯತೆ ಇದೆ ಎಂದು ಮಲ್ಲಿಕಾರ್ಜುನನಿಗೆ ಮಾಹಿತಿ ನೀಡಿದ್ದಾನೆ.
ಅದರಂತೆ ಇದೇ ತಿಂಗಳ 7ರಂದು ಆರೋಪಿಗಳು ಕಾರಿನಲ್ಲಿ ಪೊಲೀಸ್ ಡ್ರೆಸ್ ಧರಿಸಿ ನವೀನ್ ಮನೆಗೆ ನುಗ್ಗಿ, “ನೀನು ಗಾಂಜಾ ಮಾರುತ್ತಿದ್ದೀಯಾ, ಮನೆ ಸರ್ಚ್ ಮಾಡಬೇಕು” ಎಂದು ಬೆದರಿಕೆ ಹಾಕಿದ್ದಾರೆ. ನವೀನ್ ಮೇಲೆ ಲಾಠಿ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಅರೆಸ್ಟ್ ಮಾಡಬಾರದು ಅಂದರೆ ಹಣ ಕೊಡಬೇಕು ಎಂದು ಬೆದರಿಸಿದ್ದಾರೆ. ಬಳಿಕ ಖಾತೆಯಲ್ಲಿದ್ದ ₹87 ಸಾವಿರ, ಬೀರುವನಲ್ಲಿದ್ದ ₹53 ಸಾವಿರ ಹಾಗೂ ಪರ್ಸ್‌ನಲ್ಲಿದ್ದ ₹2 ಸಾವಿರ ಹಣವನ್ನು ಕಸಿದು ಪರಾರಿಯಾಗಿದ್ದರು. ಈ ಕುರಿತು ನವೀನ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಕಲಿ ಪಿಎಸ್‌ಐ ಸೇರಿ ನಾಲ್ವರನ್ನು ಬಂಧಿಸಿದ್ದು, ₹45 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


