ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಸಜೀವ ದಹನ
Lokayukta-CPI-Panchakshari-Salimath-burned-alive
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಧಾರವಾಡ : ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿ ಸಾವು ಕಂಡ ಸುದ್ದಿ ಇನ್ನೂ ಮಾಸದೇ ಇರುವಾಗ, ಅದರಂತೆಯೇ ಮತ್ತೊಂದು ಭೀಕರ ಘಟನೆ ಧಾರವಾಡದಲ್ಲಿ ನಡೆದಿದ್ದು, ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಐ20 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಇನ್ಸ್‌ಪೆಕ್ಟರ್ ಹೊರಬರಲು ಸಾಧ್ಯವಾಗದೆ ಕಾರಿನಲ್ಲೇ ಸುಟ್ಟು ದಹನಗೊಂಡಿದ್ದಾರೆ.
ಅನ್ನಿಗೇರಿ ತಾಲ್ಲೂಕಿನ ಭದ್ರಾಪುರ ಬಳಿಯ ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಅರೆರಾ ಸೇತುವೆ ಸಮೀಪ ಸಂಜೆ 7.30ರ ಹೊತ್ತಿಗೆ ಈ ಘಟನೆ ನಡೆದಿದೆ. ಗದಗದಿಂದ ಹುಬ್ಬಳ್ಳಿಗೆ ಕಾರು ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕೆಲ ಸೆಕೆಂಡುಗಳಲ್ಲಿ ಬೆಂಕಿ ಆವರಿಸಿಕೊಂಡು, ಕಾರು ಸಂಪೂರ್ಣವಾಗಿ ಕರಕಲಾಗಿದೆ.
ಹಾವೇರಿಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಿ ಸಾಲಿಮಠ ಅವರುದೇ ಕಾರ್ ಚಲಾಯಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯಿದೆ. ಗದಗದಲ್ಲಿರುವ ಕುಟುಂಬವನ್ನು ಭೇಟಿ ಮಾಡಲು ತೆರಳುವ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರೂ, ಕಾರು ಸಂಪೂರ್ಣ ಸುಟ್ಟುಹೋಗಿರುವುದರಿಂದ ಮೃತದೇಹ ಗುರುತಿಸುವುದು ಕಷ್ಟಕರವಾಗಿತ್ತು. ಬಳಿಕ ಕುಟುಂಬದವರು ಅವರ ಕೈಯಲ್ಲಿದ್ದ ಬ್ರೆಸ್ಲೆಟ್ ಮೂಲಕ ಗುರುತು ಪತ್ತೆಹಚ್ಚಿದರು.
ಡಿಕ್ಕಿಯ ಸಂದರ್ಭದಲ್ಲಿ ಪೆಟ್ರೋಲ್ ಲಿಕ್ ಆಗಿ ಸ್ಪಾರ್ಕ್‌ನಿಂದ ಬೆಂಕಿ ಹತ್ತಿರುವ ಸಾಧ್ಯತೆಯನ್ನು ಪೊಲೀಸರು ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾರವಾಡ ಎಸ್.ಪಿ. ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


