ಷೇರು ಮಾರುಕಟ್ಟೆ ಹೆಸರಿನಲ್ಲಿ ಉದ್ಯಮಿಗೆ 8.03 ಕೋಟಿ ವಂಚನೆ
ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಉದ್ಯಮಿ ರಾಜೇಂದ್ರ ನಾಯ್ಡು ಅವರಿಗೆ ನಕಲಿ ಆ್ಯಪ್ ಮೂಲಕ ₹8.03 ಕೋಟಿ ವಂಚನೆ ನಡೆದಿದೆ. ಲಾಭಾಂಶ ತೋರಿಸಿ ಹಣ ವಿತ್‌ಡ್ರಾ ವೇಳೆ ಸೇವಾ ಶುಲ್ಕ ಕೇಳಿ ಮೋಸ ಬಯಲಾಗಿದೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ₹60 ಲಕ್ಷ ಫ್ರೀಜ್ ಮಾಡಿ ತನಿಖೆ ಮುಂದುವರಿದಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ ₹8.03 ಕೋಟಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಉದ್ಯಮಿ ರಾಜೇಂದ್ರ ನಾಯ್ಡು ಅವರಿಗೆ ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ ನಡೆದಿದ್ದು, ಅವರು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರಾಜೇಂದ್ರ ನಾಯ್ಡು ಅವರಿಗೆ ಕರೆ ಮಾಡಿದ್ದ ಅಪರಿಚಿತರು, ಅವರು ಈ ಹಿಂದೆ ಪಡೆದಿದ್ದ ಸಾಲದ ಕುರಿತು ಮಾತನಾಡುತ್ತಾ, “ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶಪಡೆಯಬಹುದು” ಎಂದು ನಂಬಿಸಿದ್ದಾರೆ. ಕೆಲ ಚಾರಿಟಿ ಸೇವೆಗಳನ್ನು ನಡೆಸುತ್ತಿದ್ದ ರಾಜೇಂದ್ರ ನಾಯ್ಡು ಅವರು, ಹೂಡಿಕೆಯ ಮೂಲಕ ದೊರೆಯುವ ಲಾಭವನ್ನು ಸಮಾಜ ಸೇವೆಗೆ ಬಳಸಬಹುದು ಎಂಬ ಉದ್ದೇಶದಿಂದ ಹೂಡಿಕೆ ಮಾಡಲು ಮುಂದಾಗಿದ್ದರು.
ನಂತರ ವಂಚಕರು ರಾಜೇಂದ್ರ ನಾಯ್ಡು ಅವರ ಮೊಬೈಲ್ ಫೋನ್‌ನಲ್ಲಿ ನಕಲಿ ಆ್ಯಪ್ ಒಂದನ್ನು ಇನ್‌ಸ್ಟಾಲ್ ಮಾಡಿಸಿದ್ದಾರೆ. ಆರಂಭದಲ್ಲಿ ₹25 ಲಕ್ಷ ಹೂಡಿಕೆ ಮಾಡಿದ ಅವರು, ನಂತರ ಹಂತ ಹಂತವಾಗಿ ಒಟ್ಟು ₹8.03 ಕೋಟಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಪೂರಕವೆಂಬಂತೆ ಆ್ಯಪ್‌ನಲ್ಲಿ ₹59.4 ಕೋಟಿ ಲಾಭಾಂಶ ತೋರಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹೂಡಿಕೆಯಿಂದ ಭಾರೀ ಲಾಭ ಬಂದಿದೆ ಎಂದು ನಂಬಿದ್ದ ರಾಜೇಂದ್ರ ನಾಯ್ಡು ಅವರು, ₹15 ಕೋಟಿ ಹಣವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಹಣ ಕೈಗೆ ಸಿಗದೆ ಅನುಮಾನಗೊಂಡಿದ್ದಾರೆ. ಈ ಕುರಿತು ವಂಚಕರನ್ನು ಸಂಪರ್ಕಿಸಿದಾಗ, “ಸೇವಾಶುಲ್ಕವಾಗಿ ಶೇ.18ರಷ್ಟು ಅಂದರೆ ಸುಮಾರು ₹2.70 ಕೋಟಿ ಪಾವತಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಆಗ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ರಾಜೇಂದ್ರ ನಾಯ್ಡು ಅವರು ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.
ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು, ವಂಚಕರ ಖಾತೆಯಲ್ಲಿ ಇದ್ದ ಸುಮಾರು ₹60 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ವಂಚನೆ ಕುರಿತು ಪ್ರತಿಕ್ರಿಯಿಸಿದ ರಾಜೇಂದ್ರ ನಾಯ್ಡು ಅವರು, “ನನಗೆ ನಡೆದ ಮೋಸ ಇನ್ನಾರಿಗೂ ಆಗಬಾರದು. ಜನರುಇಂತಹ ಆನ್‌ಲೈನ್ ಹೂಡಿಕೆ ವಂಚನೆಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು” ಎಂದು ಮನವಿ ಮಾಡಿದ್ದಾರೆ.


