ಟ್ರಕ್ ಡಿಕ್ಕಿ: ಏಷ್ಯಾನೆಟ್ ಸುವರ್ಣನ್ಯೂಸ್ ಸಿಬ್ಬಂದಿ ಲಲಿತಮ್ಮ ದಾರುಣ ಸಾವು
ಬೆಂಗಳೂರು ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆಯಲ್ಲಿ ಟ್ರಕ್ ಡಿಕ್ಕಿಯಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ಹೌಸ್‌ಕೀಪಿಂಗ್ ಸಿಬ್ಬಂದಿ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಶೇಷಾದ್ರಿಪುರಂ ಸಂಚಾರ ಪೊಲೀಸ್ ತನಿಖೆ ಪ್ರಾಥಮಿಕವಾಗಿ ತಿಳಿಸಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ನಗರದ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಹೌಸ್ ಕೀಪಿಂಗ್ ಸಿಬ್ಬಂದಿ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗಲೇ ದುರಂತ ಸಂಭವಿಸಿದೆ. ಲಲಿತಮ್ಮ ಅವರು ಸಂಜೆ ಕೆಲಸ ಮುಗಿಸಿ ಮನೆ ಕಡೆ ಬರುತ್ತಿದ್ದ ವೇಳೆ ಪ್ಯಾರಲೆಲ್ ರಸ್ತೆ ದಾಟುವಾಗ ಅತಿವೇಗದಲ್ಲಿ ಬಂದಿದ್ದ ಟ್ರಕ್ ಒದೆದಿದೆ. ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ಲಲಿತಮ್ಮ ಅವರ ಮೇಲೆ ಟ್ರಕ್‌ನ ಚಕ್ರ ಹಾದುಹೋಗಿದ್ದು, ಪರಿಣಾಮ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ತಕ್ಷಣ ಶೇಷಾದ್ರಿಪುರಂ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು, ಸ್ಥಳ ಮಹಜರು ಮಾಡಿ, ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಟ್ರಕ್ ಚಾಲಕ ಮತ್ತು ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದ್ದು, ಟ್ರಾಫಿಕ್ ದಟ್ಟಣೆಯೂ ಸಂಭವಿಸಿತು. ಹೆಚ್ಚಿನ ತನಿಖೆ ಮುಂದುವರಿದಿದೆ.
ಸಂಪಾದಕ ಅಜಿತ್ ಹನಮಕ್ಕನವರ್ ಸಂತಾಪ
ತಾಯಿಯಂಥ ಜೀವ ಲಲಿತಮ್ಮ. ಆಫೀಸ್ ನಲ್ಲಿ ಕಾಫಿ ಕೊಡ್ತಿದ್ದವರು. ಅಪರೂಪಕ್ಕೊಮ್ಮೆ ಟೆರೇಸಿನಲ್ಲಿರುವ ಕೆಫೆಟೇರಿಯಾಕ್ಕೆ ಊಟಕ್ಕೆ ಹೋದರೆ ಅಂತಃಕರಣದಿಂದ ಶುದ್ಧವಾಗಿ ಒರೆಸಿದ ತಟ್ಟೆ - ಗ್ಲಾಸಿನಲ್ಲಿ ನೀರು ತಂದಿಟ್ಟು ಊಟ ಮಾಡಿ ಸರ್ ಅನ್ನೋರು. ಲೈವ್ ಮಧ್ಯೆ ಸ್ವಲ್ಪ ಜಾಸ್ತಿನೇ ಕಾಫಿ ಕುಡಿಯೋ ಅಭ್ಯಾಸ ನನ್ನದು. ಮುಖದ ಮೇಲೊಂದು ಬೇಜಾರಿನ ಗೆರೆಯೂ ಇಲ್ಲದೇ ಪ್ರತಿ ಬ್ರೇಕ್ ನಲ್ಲೂ ಕಪ್ ಹಿಡಕೊಂಡು ನಿಂತಿರುತ್ತಿದ್ದರು. ಇವತ್ತು ನಾಲ್ಕುವರೆ ತನಕ ಡ್ಯೂಟಿ ಮುಗಿಸಿಕೊಂಡು ಮನೆಗೆ ನಡಕೊಂಡು ಹೋಗುತ್ತಿದ್ದವರ ಮೇಲೆ ಅದ್ಯಾವನೋ ಲಾರಿ ಹತ್ತಿಸಿಬಿಟ್ಟನಂತೆ. ಲಲಿತಮ್ಮ ಅಲ್ಲೇ ತಲೆ ಹೋಳಾಗಿ ಪ್ರಾಣ ಬಿಟ್ಟಿದ್ದಾರೆ. ಇವತ್ತಿನ ಕಾಫಿ ತುಂಬ ಕಹಿ ಎಂದು ಸಂಪಾದಕ ಅಜಿತ್ ಹನಮಕ್ಕನವರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.


