ಚನ್ನಬಸವ ಶ್ರೀಗಳಿಂದ ಇಂಗಳೇಶ್ವರದಲ್ಲಿ ವಚನ ಗುಮ್ಮಟ ನಿರ್ಮಾಣ : ಸಚಿವ ಶಿವಾನಂದ ಪಾಟೀಲ

ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಶ್ರೀಗಳ ಬಸವೈಕ್ಯ ಸಂದರ್ಭದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು, ಮಾತೃಹೃದಯದ ಮಮತೆ ಮತ್ತು ಭಕ್ತರಿಗಾಗಿ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಿ ಭಾವಪೂರ್ಣ ನಮನ ಸಲ್ಲಿಸಿದರು. ಗೋಲಗುಂಬಜ ಮಾದರಿಯಲ್ಲಿ ನಿರ್ಮಿಸಿದ ವಚನಶಿಲಾ ಮಂಟಪ, ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸುವ ಶ್ರೀಗಳ ದಿಟ್ಟ ಸಂಕಲ್ಪ ಹಾಗೂ ಅವರ ಮಂದಹಾಸದ, ಮಮತೆಯ ವ್ಯಕ್ತಿತ್ವವನ್ನು ವೇದಿಕೆಯ ಗಣ್ಯರು ಪ್ರಶಂಸಿಸಿದರು.

Dec 12, 2025 - 20:43
Dec 12, 2025 - 20:46
 0
ಚನ್ನಬಸವ ಶ್ರೀಗಳಿಂದ ಇಂಗಳೇಶ್ವರದಲ್ಲಿ ವಚನ ಗುಮ್ಮಟ ನಿರ್ಮಾಣ : ಸಚಿವ ಶಿವಾನಂದ ಪಾಟೀಲ



ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಇಂಗಳೇಶ್ವರ : ರಾಗ, ಧ್ವೇಶಗಳಿಲ್ಲದ ಮಂದಹಾಸದ ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಶ್ರೀಗಳು ಆದಿಲ್ ಶಾಹಿ ಗೋಲಗುಂಬಜ ಕಟ್ಟಿದ ಮಾದರಿಯಲ್ಲಿ ವಚನ ಶಿಲಾ ಮಂಟಪ ನಿರ್ಮಿಸಿ ಸಮಾಜಕ್ಕೆ, ಮಠಾಧೀಶರಿಗೆ ಸಾರ್ವಕಾಲಿಕ ಮಾದರಿ ರೀತಿ ಬದುಕಿ ತೋರಿದ ಮಹಾನ್ ಚೇತನವಾಗಿದ್ದರು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.

ಶುಕ್ರವಾರ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಬಸವೈಕ್ಯರಾದ ಚನ್ನಬಸವ ಶ್ರೀಗಳ ಭಕ್ತಿ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸದಾ ಹಸನ್ಮುಖಿಯಾಗಿದ್ದ ಚನ್ನಬಸವ ಶ್ರೀಗಳು ಭಕ್ತರ ಪಾಲಿಗೆ ಮಾತೃಹೃದಯದ ಮಮತಾಮಯಿ ಆಗಿದ್ದರು. ಸದಾ ಹಸನ್ಮುಖದಿಂದ ಇರುತ್ತಿದ್ದ ಶ್ರೀಗಳು ತಮ್ಮ ದರ್ಶನಕ್ಕೆ ಬರುತ್ತಿದ್ದ ಯಾವುದೇ ಭಕ್ತರಿದ್ದರೂ ಸಜ್ಜಕ-ತುಪ್ಪ ಪ್ರಸಾದ ಬಡಿಸದೇ ಬಿಡುತ್ತಿರಲಿಲ್ಲ

ಭಕ್ತರಿಗೆ ಸ್ವಯಂ ತಾವು ಬಡಿಸಿದ ಪ್ರಸಾದ ಸೇವಿದರೆ ಅವರು ಅತ್ಯಂತ ಸಂತೃಪ್ತತೆ ತೋರುತ್ತಿದ್ದರು. ಹಿಂದೊಮ್ಮೆ ಶ್ರೀಗಳ ದರ್ಶನಕ್ಕೆ ಬಂದಿದ್ದಾಗ ನನಗೆ ಸ್ವಯಂ ತಾವೇ ಪ್ರಸಾದ ಬಡಿಸಿದ್ದರು. ಶ್ರೀಗಳು ನನಗಂತೂ ಸಜ್ಜಕಕ್ಕಿಂತ ತುಪ್ಪವನ್ನೇ ಹೆಚ್ಚಾಗಿ ಬಡಿಸಿ ಮಮತೆಯ ಮಾತೃತ್ವ ತೋರಿದ್ದರು ಎಂದು ಶ್ರೀಗಳಿಂದ ತಾವು ಪಡೆದ ಮಮತಾನುಭವ ವಿವರಿಸಿದರು.

ಬಸವಾದಿ ಶರಣರ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಷಟಸ್ಥಲ ಮಂಟಪ ರೂಪಿಸುವ ಚನ್ನಬಸವ ಶ್ರೀಗಳ ಛಲವಾದ ಸಣ್ಣದೇನಲ್ಲ.‌ ಶ್ರೀಗಳ ಸಂಕಲ್ಪವನ್ನು ಬಹುತೇಕರು ಅಸಾಧ್ಯದ ನಿರ್ಧಾರ ಎಂದಿದ್ದರು. ಸ್ವಯಂ ಅಂದು ಸಚಿವರಾಗಿದ್ದ ಎಂ.ಪಿ.ಪ್ರಕಾಶ ಅವರೂ ಸಾಹಸಕ್ಕೆ ಕೈಹಾಕಿದ್ದೀರಿ ಎಂದಿದ್ದರು. ಭಕ್ತರ ಸಹಕಾರದಿಂದ ಎಲ್ಲವೂ ಸಾಧ್ಯವಿದೆ ಎಂದಿದ್ದ ಶ್ರೀಗಳು, ಸಂಕಲ್ಪ ಸಿದ್ಧ ಮಾಡಿಯೇ ಹೋದರು ಎಂದು ಘಟನೆಗಳನ್ನು ಸ್ಮರಿಸಿದರು.

ತಮ್ಮ‌ ದರ್ಶನಕ್ಕೆ ಬತುತ್ತಿದ್ದ ಭಕ್ತರು ಸಣ್ಣವ, ದೊಡ್ಡವ, ಬಡವ, ಶ್ರೀಮಂತ ಎಂದು ಎಣಿಸದೇ ನಗುತ್ತಲೇ ಎಲ್ಲರಿಗೂ ಸಮಾನ ಪ್ರೀತಿಯ ಮಮತೆಯನ್ನೇ ತೋರುತ್ತಿದ್ದರು. ಸದಾ ಮಂದಸ್ಮಿತರಾಗಿರುತ್ತಿದ್ದ ಶ್ರೀಗಳು ಶತಮಾನಕ್ಕೆ ಹತ್ತಿರದಲ್ಲಿದ್ದರೂ ಆರೋಗ್ಯಪೂರ್ಣರಾಗಿದ್ದರು. ಪರಿಣಾಮವೇ ಶರೀರ ಬಾಗದ, ಮುಖವೂ ಬಾಡದ ಚೈತನ್ಯಶೀಲತೆ ಹೊಂದಿದ್ದರು ಎಂದು ಬಣ್ಣಸಿದರು.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಕರ್ನಾಟಕ ರಾಜ್ಯ ಮಾರ್ಜಕ ನಿಗಮದ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್. ನಾಡಗೌಡ, ಇಂಗಳೇಶ್ವರ ವಿರಕ್ತ ಮಠದ ಉತ್ತರಾಧಿಕಾರಿ ಸಿದ್ಧಲಿಂಗ ಶ್ರೀಗಳು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗಳು, ನಿಡಸೋಸಿ ಶ್ರೀಗಳು, ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳು, ಯರನಾಳ ಶ್ರೀಗಳು ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಮಠಾಧೀಶರು ವೇದಿಕೆ ಮೇಲಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.