ನಿವೃತ್ತ ಆರ್‌ಎಫ್‌ಒ ಮನೆಯಲ್ಲಿ ಕಳ್ಳತನ: ಪುಣೆಯಲ್ಲಿ ಪರಾರಿಯಾಗಿದ್ದ ಆರೋಪಿ ಕಲಬುರಗಿ ಖಾಕಿ ಬಲೆಗೆ
ಕಲಬುರಗಿಯ ನಿವೃತ್ತ ಆರ್‌ಎಫ್‌ಒ ಮನೆಯಲ್ಲಿ ನಡೆದ 40 ತೊಲೆ ಚಿನ್ನ ಕಳ್ಳತನ ಪ್ರಕರಣವನ್ನು ಪೊಲೀಸರು ಬಗೆಹರಿಸಿ, ಪುಣೆಗೆ ಪರಾರಿಯಾಗಿದ್ದ ಆರೋಪಿ ನವೀನ್ ಜೋಶಿಯನ್ನು ಬಂಧಿಸಿದ್ದಾರೆ. ಸಿಸಿಟಿವಿ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು, ವಶಪಡಿಸಿಕೊಂಡ ಚಿನ್ನದಲ್ಲೇ ನೈಜ ಹಾಗೂ ನಕಲಿ ಆಭರಣಗಳು ಪತ್ತೆಯಾಗಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕಲಬುರಗಿ: ಕಳೆದ ತಿಂಗಳು 21 ಹಾಗೂ 22ರಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವೃತ್ತ ಆರ್‌ಎಫ್‌ಒ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ, ಪುಣೆಗೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿ ಬಂಧಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ಹೇಳುವಂತೆ, ಬಂಧಿತ ಆರೋಪಿ ನವೀನ್ ಜೋಶಿ (49), ಮೂಲತಃ ಕಾರವಾರದವನು, ಇತ್ತೀಚೆಗೆ ಧಾರವಾಡದಲ್ಲಿ ವಾಸವಿದ್ದ. ಆತನ ತಂದೆ ವಿದ್ಯುತ್ ನಿಗಮದಲ್ಲಿ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿದ್ದರು. ದೂರುದಾರರು 40 ತೊಲೆ ಚಿನ್ನ (ಸುಮಾರು 400 ಗ್ರಾಂ)ಕಳವಾಗಿರುವುದಾಗಿ ದೂರು ನೀಡಿದ್ದರು.
ಆಯುಕ್ತರು ಮುಂದುವರಿಸಿ ಮಾತನಾಡಿ “ಘಟನಾಸ್ಥಳದಲ್ಲಿ ಸಿಸಿಟಿವಿ ಇರಲಿಲ್ಲ. ಸೋಕೋ ತಂಡ ಹಾಗೂ ಡಾಗ್ ಸ್ಕ್ವಾಡ್ ಸ್ಥಳಕ್ಕೆ ಭೇಟಿ ನೀಡಿದ್ದರೂ ಯಾವುದೇ ಸುಳಿವು ಸಿಗಲಿಲ್ಲ. ಆದರೆ ಆರೋಪಿ ಬಳಸಿದ್ದ ಕೈಗವಸು ಮಾತ್ರ ಪತ್ತೆಯಾಯಿತು. ಪಕ್ಕದ ಮನೆಯ ಸಿಸಿಟಿವಿ ದೃಶ್ಯದಲ್ಲಿ ಆರೋಪಿಯ ಆಕಾರ ಹಾಗೂ ಚಲನವಲನಗಳು ಗೋಚರಿಸಿವೆ. ಅದರ ಆಧಾರದಲ್ಲಿ ಅವನು ಸೋಲಾಪುರ ಹಾಗೂ ನಂತರ ಪುಣೆಯಲ್ಲಿ ಮೊಬೈಲ್ ಬಳಸಿರುವುದು ಪತ್ತೆಯಾಗಿ, ಅಲ್ಲಿ ನಮ್ಮ ತಂಡ ಅವನನ್ನು ಬಂಧಿಸಿದೆ,” ಎಂದು ವಿವರಿಸಿದರು.
ಖರ್ಚಿಗೆ ಹಣ ಇಲ್ಲದ ಕಾರಣ ಕಳ್ಳತನಕ್ಕೆ ಇಳಿದ ಆರೋಪಿ
ಕಲಬುರಗಿಗೆ ಬಂದಿದ್ದೇ ಮೊದಲ ಬಾರಿಗೆ. ಪುಣೆಯಿಂದ ಕನ್ಯಾಕುಮಾರಿಗೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಟಿಟಿ ಕಲಬುರಗಿ ಸ್ಟೇಷನ್‌ನಲ್ಲಿ ಇಳಿಸಿದ್ದರು. ನಂತರ ಖರ್ಚಿಗೆ ಹಣವಿಲ್ಲದೇ ಗಾಬರೇ ಲೇಔಟ್‌ನಲ್ಲಿ ರಾತ್ರಿಯಿಡೀ ಅಲೆದಾಡಿ, ಬೀಗ ಹಾಕಿದ್ದ ಮನೆಯಲ್ಲಿ ನುಗ್ಗಿ ಕಳ್ಳತನ ಮಾಡಿದ್ದಾನೆ ಎಂದು ಆಯುಕ್ತರು ತಿಳಿಸಿದರು.
ಆರೋಪಿಯ ಬಳಿಯಿಂದ ₹50,000–₹60,000 ನಗದು, ಚಿನ್ನ–ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪುಣೆಗೆ ಪರಾರಿಯಾಗಿದ್ದಾನೆ.
ಟೂಲ್‌ಕಿಟ್ ಸಹಿತ ಸಜ್ಜಾಗಿ ಸುತ್ತಾಡುತ್ತಿದ್ದ ಕಳ್ಳ
ಕಳ್ಳತನಕ್ಕಾಗಿ ಆರೋಪಿ ಕಟ್ಟರ್ ಬ್ಲೇಡ್, ಚಿನ್ನ ಕರಗಿಸಲು ಬಳಸುವ ಗ್ಯಾಸ್ ಹೀಟರ್, ಇತರೆ ಉಪಕರಣಗಳನ್ನೊಳಗೊಂಡ ಟೂಲ್‌ಕಿಟ್ ತೆಗೆದುಕೊಂಡೇ ಸಂಚರಿಸುತ್ತಿದ್ದ. ಕನ್ಯಾಕುಮಾರಿಯಲ್ಲಿ ಕಳ್ಳತನ ಮಾಡಲು ಹೋಗುವಾಗ ಅನಿವಾರ್ಯವಾಗಿ ಕಲಬುರಗಿಯಲ್ಲಿ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾದ ಮೇಲೆ, ಇಲ್ಲಿ ಕಳ್ಳತನಕ್ಕೆ ಕೈ ಹಾಕಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
“ಪ್ರಕರಣವನ್ನು ಬೇಧಿಸುವಲ್ಲಿ ನಮ್ಮ ಸಿಬ್ಬಂದಿ ತೋರಿದ ತಂತ್ರಜ್ಞಾನಾಧಾರಿತ ಕೆಲಸ ಶ್ಲಾಘನೀಯ. ಅವರಿಗೆ ಪ್ರಶಂಸನಾ ಪತ್ರ ನೀಡಲಾಗುತ್ತದೆ,” ಎಂದು ಆಯುಕ್ತರು ಹೇಳಿದರು.
ಪೊಲೀಸರು ವಶಪಡಿಸಿಕೊಂಡ ಚಿನ್ನದ ವಿವರ:
• ಒಟ್ಟು ಕಳವಾಗಿದ್ದ ಚಿನ್ನ: 40 ತೊಲೆ (ಸುಮಾರು 400 ಗ್ರಾಂ)
• ವಶಪಡಿಸಿಕೊಂಡ ಚಿನ್ನ: ಸಂಪೂರ್ಣ
• ಅದರಲ್ಲೇ: 23 ತೊಲೆ ನಕಲಿ ಚಿನ್ನ, 17 ತೊಲೆ ನೈಜ ಚಿನ್ನ
ಆರೋಪಿ ನವೀನ್ ಜೋಶಿ ಸುಮಾರು 30 ವರ್ಷಗಳ ಹಿಂದೆ ರಾಯಚೂರಿನ ಶಕ್ತಿನಗರದಲ್ಲಿ ನಡೆದ ಕಳ್ಳತನ ಪ್ರಕ್ರಣದಲ್ಲಿ ದೋಷಿಯಾಗಿದ್ದು, ಅದರಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿದ್ದ. ಇದೀಗ ಪುಣೆಯಲ್ಲಿ ಟಿಫಿನ್ ಸೆಂಟರ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದರು.


