ದಾವಣಗೆರೆ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಚರಣೆ : 51 ಲಕ್ಷ ಮೌಲ್ಯದ ಚಿನ್ನಾಭರಣ ವಶ
ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಮದುವೆ ರಿಸಪ್ಷನ್ ವೇಳೆ ‘ಬ್ಯಾಂಡ್ ಬಾಜಾ ಗ್ಯಾಂಗ್’ ₹67 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದು, ಪ್ರಕರಣದ ಜಾಡು ಹಿಡಿದ ಪೊಲೀಸರು ಮಧ್ಯಪ್ರದೇಶದಲ್ಲಿ ದಾಳಿ ನಡೆಸಿ ₹51 ಲಕ್ಷ ಮೌಲ್ಯದ 524 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ದಾವಣಗೆರೆ: ಮಧ್ಯಪ್ರದೇಶ ಮೂಲದ ‘ಬ್ಯಾಂಡ್ ಬಾಜಾ ಗ್ಯಾಂಗ್’ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಮದುವೆ ರಿಸಪ್ಷನ್ ಕಾರ್ಯಕ್ರಮದ ವೇಳೆ ₹67 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ, ದಾವಣಗೆರೆ ಪೊಲೀಸರು ₹51 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಿಸಪ್ಷನ್ ಸಂಭ್ರಮದಲ್ಲೇ ಚಿನ್ನ ಕಳವು
“ನವೆಂಬರ್ 14ರಂದು ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ರಿಸಪ್ಷನ್ ಕಾರ್ಯಕ್ರಮ ನಡೆಯುತ್ತಿತ್ತು. ಸಂಭ್ರಮದ ನಡುವೆ ಮಗು ಡ್ಯಾನ್ಸ್ ಮಾಡುತ್ತಿದ್ದಾಗ, ದೂರುದಾರರ ತಾಯಿ ಚಿನ್ನಾಭರಣ ತುಂಬಿದ್ದ ಬ್ಯಾಗ್ ಅನ್ನು ನೆಲದ ಮೇಲೆ ಇಟ್ಟು ಚಪ್ಪಾಳೆ ತಟ್ಟಿದ್ದರು. ನಂತರ ನೋಡಿದಾಗ ಬ್ಯಾಗ್ ನಾಪತ್ತೆಯಾಗಿತ್ತು. ಇಡೀ ರೆಸಾರ್ಟ್‌ನಲ್ಲಿ ಶೋಧಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು,” ಎಂದು ಎಸ್ಪಿ ಹೇಳಿದರು.
ಸಿಸಿಟಿವಿ, ಟೋಲ್ ಪರಿಶೀಲನೆ—ಮಧ್ಯಪ್ರದೇಶದ ಸುಳಿವು
ಸಿಸಿಟಿವಿ ದೃಶ್ಯಗಳು ಹಾಗೂ ಟೋಲ್ ಪ್ಲಾಜಾಗಳ ಪರಿಶೀಲನೆ ಬಳಿಕ, ಇದು ಮಧ್ಯಪ್ರದೇಶದ ಸಿಸೋಡಿಯಾ ಗ್ಯಾಂಗ್ಕೃತ್ಯವಾಗಿರಬಹುದೆಂಬ ಅನುಮಾನ ಮೂಡಿತು. ಈ ಹಿನ್ನೆಲೆ ನಮ್ಮ ಸಬ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಂಡವು ಮಧ್ಯಪ್ರದೇಶಕ್ಕೆ ತೆರಳಿ ಸುಮಾರು 15 ದಿನಗಳ ಕಾಲ ಅಲ್ಲಿ ಬೀಡುಬಿಟ್ಟು ತನಿಖೆ ನಡೆಸಿತು.
ಅಪ್ರಾಪ್ತರ ಮೂಲಕ ಕಳ್ಳತನ ನಡೆಸುವ ಗ್ಯಾಂಗ್
“ತನಿಖೆ ವೇಳೆ ಇದು ‘ಬ್ಯಾಂಡ್ ಬಾಜಾ ಗ್ಯಾಂಗ್’ ಎಂಬುದು ಸ್ಪಷ್ಟವಾಯಿತು. ಮಧ್ಯಪ್ರದೇಶದ ಹುಲಿಖೇಡ್, ಕೇಡಿಯಾ ಹಾಗೂ ಝಾನ್ಸಿ ಭಾಗಗಳಲ್ಲಿ ಈ ಗ್ಯಾಂಗ್ ಸಕ್ರಿಯವಾಗಿದೆ. ಕಾನೂನಿನಡಿ ಹೆಚ್ಚಿನ ಶಿಕ್ಷೆ ಆಗುವುದಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತರನ್ನು ಕಳ್ಳತನಕ್ಕೆ ಬಳಸುತ್ತಾರೆ. ಮದುವೆ ಸಮಾರಂಭಗಳಲ್ಲಿ ಸಾಮಾನ್ಯ ಅತಿಥಿಗಳಂತೆ ಮದುವೆ ಬಟ್ಟೆ ಧರಿಸಿ ಪ್ರವೇಶಿಸುತ್ತಾರೆ. ಮಹಿಳೆಯರ ಗಮನ ಬೇರೆಡೆ ಹೋದ ಕ್ಷಣದಲ್ಲಿ ಕಳ್ಳತನ ಮಾಡಿ ಸುಲಭವಾಗಿ ಪರಾರಿಯಾಗುತ್ತಾರೆ,” ಎಂದು ಎಸ್ಪಿ ವಿವರಿಸಿದರು.
524 ಗ್ರಾಂ ಚಿನ್ನ ವಶ
ಮಧ್ಯಪ್ರದೇಶದ ಪಚೋರಿ ತಾಲೂಕಿನ ಬುಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿ ಆರೋಪಿಗಳ ಮನೆಗಳಿಗೆ ದಾಳಿ ನಡೆಸಿ, 524 ಗ್ರಾಂ ಚಿನ್ನಾಭರಣವನ್ನು ರಿಕವರಿ ಮಾಡಲಾಗಿದೆ, ಇದು ಸುಮಾರು ₹51 ಲಕ್ಷ ಮೌಲ್ಯದದು ಎಂದು ಅವರು ಮಾಹಿತಿ ನೀಡಿದರು.
ತಂತ್ರಜ್ಞಾನದ ತಪ್ಪಿಸಿಕೊಳ್ಳುವಿಕೆ : ಆದರೂ ಯಶಸ್ಸು
“ಈ ಗ್ಯಾಂಗ್ ಸದಸ್ಯರು ಟೋಲ್ ರಸ್ತೆಗಳನ್ನು ಬಳಸದೇ, ಮಾರ್ಗಗಳನ್ನು ಬದಲಾಯಿಸಿ ಸಂಚರಿಸುತ್ತಾರೆ. ಕಳ್ಳತನದ ಬಳಿಕ ತಕ್ಷಣ ಸ್ಥಳ ಬಿಟ್ಟು ಹೋಗದೇ 7–8 ಗಂಟೆಗಳ ಬಳಿಕ ಹೊರಡುತ್ತಾರೆ. ಯಾವುದೇ ರೀತಿಯ ಸಾಕ್ಷಿ ಉಳಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಷ್ಟೆಲ್ಲಾ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ತಂಡ ಅತ್ಯುತ್ತಮ ಕೆಲಸ ಮಾಡಿದೆ,” ಎಂದು ಎಸ್ಪಿ ಶ್ಲಾಘಿಸಿದರು.
ಪೊಲೀಸ್ ಸಿಬ್ಬಂದಿಗೆ ಪ್ರಶಂಸೆ
ಈ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಡಿಎಸ್‌ಪಿ ಬಿ ಎಸ್, ಬಸವರಾಜ್, ಇನ್‌ಸ್ಪೆಕ್ಟರ್ ಅಣ್ಣಯ್ಯ, ಹಾಗೂ ಸಿಬ್ಬಂದಿ ಪ್ರಭು ಅವರ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದರು.


