ಹೊಸ ವರ್ಷಾಚರಣೆ: ಪಬ್, ಬಾರ್, ಕ್ಲಬ್‌ಗಳಿಗೆ ಹೊಸ ವರ್ಷದ ಮಾರ್ಗಸೂಚಿ ಬಿಡುಗಡೆ
ಗೋವಾ ನೈಟ್‌ಕ್ಲಬ್ ಅಗ್ನಿ ದುರಂತದ ಹಿನ್ನೆಲೆ ಹೊಸ ವರ್ಷಾಚರಣೆಗೆ ಬೆಂಗಳೂರು ಪಬ್–ಕ್ಲಬ್‌ಗಳಲ್ಲಿ ಹೊಸ ನಿಯಮಗಳು ಜಾರಿ. ಪೊಲೀಸ್ ಇಲಾಖೆ 19 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿ ಉಲ್ಲಂಘನೆಗೆ ಕಠಿಣ ಕ್ರಮ ಎಚ್ಚರಿಕೆ ನೀಡಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಈ ಬಾರಿ ಹೊಸ ವರ್ಷ (New Year 2026) ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಹೊಸ ವರ್ಷಾಚರಣೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಗೋವಾದ ನೈಟ್‌ಕ್ಲಬ್ ಅಗ್ನಿ ದುರಂತದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆ ಬಳಿಕ, ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಒಟ್ಟಾಗಿ ಬೆಂಗಳೂರಿನ ಪಬ್, ಬಾರ್, ಕ್ಲಬ್‌ಗಳಿಗೆ 19 ಅಂಶಗಳ ಮಾರ್ಗಸೂಚಿ (New Year Guidelines) ಬಿಡುಗಡೆ ಮಾಡಿವೆ.
ಧ್ವನಿವರ್ಧಕಗಳ ಶಬ್ದ ಮಿತಿ, ಎಲ್ಇಡಿ ಸ್ಕ್ರೀನ್ ಬಳಕೆ, ಅಗ್ನಿ ಸುರಕ್ಷತಾ ಮಾನದಂಡಗಳು ಸೇರಿದಂತೆ ಹೊಸ ವರ್ಷಾಚರಣೆಗೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಹೊಸ ವರ್ಷಕ್ಕೆ ಹೊಸ ರೂಲ್ಸ್ – ಮಾರ್ಗಸೂಚಿಯ ಮುಖ್ಯ ಅಂಶಗಳು
1. ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಕಡ್ಡಾಯ; ಎಲ್ಲ ನಿಯಮಗಳನ್ನು ಪಾಲಿಸಬೇಕು.
2. ಹೊಸ ವರ್ಷಾಚರಣೆಗೆ ನಿಗದಿಪಡಿಸಿರುವ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
3. ಧ್ವನಿವರ್ಧಕ ಬಳಕೆಗೆ ಪರವಾನಗಿ ಪಡೆದು ನಿಗದಿತ ಶಬ್ದ ಮಿತಿಯಲ್ಲೇ ಬಳಸಬೇಕು.
4. ಸ್ಥಳಾವಕಾಶಕ್ಕೆ ಅನುಗುಣವಾಗಿ ಮಾತ್ರ ಟಿಕೆಟ್/ಪಾಸ್ ವಿತರಿಸಬೇಕು; ನೆಲಮಹಡಿ, ಪಾರ್ಕಿಂಗ್ ಸ್ಥಳ ಹಾಗೂ ಟೆರೆಸ್‌ನಲ್ಲಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ಇಲ್ಲ.
5. ಕಾರ್ಯಕ್ರಮ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಸ್ಕ್ರೀನ್ ಪ್ರದರ್ಶನ ನಿಷೇಧ.
6. ಕಾರ್ಯಕ್ರಮಕ್ಕೆ ಆಗಮಿಸುವವರ ತಪಾಸಣೆ ಕಡ್ಡಾಯ; ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡುಬಂದರೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು.
7. ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಬೇಕು; ನಿರ್ಗಮನ ದ್ವಾರಗಳು ವಿಶಾಲವಾಗಿರಬೇಕು.
8. ಕಾರ್ಯಕ್ರಮದ ಎಲ್ಲಾ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕನಿಷ್ಠ 30 ದಿನಗಳವರೆಗೆ ದೃಶ್ಯ ಸಂಗ್ರಹಣೆ ಕಡ್ಡಾಯ.
9. ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು; ದಾಳಿ ವೇಳೆ ಸಿಕ್ಕಿಬಿದ್ದರೆ ಕಟ್ಟಡದ ಮಾಲೀಕ ಅಥವಾ ಮ್ಯಾನೇಜರ್ ವಿರುದ್ಧ ಪ್ರಕರಣ.
10. ಸಾರ್ವಜನಿಕರ ವಾಹನಗಳಿಗೆ ತಮ್ಮದೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
11. ಸೆಲೆಬ್ರಿಟಿಗಳು, ಡಿಜೆಗಳು, ನಟ–ನಟಿಯರನ್ನು ಆಹ್ವಾನಿಸಿದ್ದಲ್ಲಿ ಅವರ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.
12. ಪಾರ್ಕಿಂಗ್ ಸ್ಥಳಗಳು ಹಾಗೂ ಮಹಿಳೆಯರು ಇರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜನೆ.
13. ಭದ್ರತಾ ಸಿಬ್ಬಂದಿ ಹಾಗೂ ಬೌನ್ಸರ್‌ಗಳನ್ನು ಒದಗಿಸುವ ಏಜೆನ್ಸಿಗಳು ‘PSARA’ಯಲ್ಲಿ ನೋಂದಾಯಿತವಾಗಿರಬೇಕು.
14. ಪಾರ್ಟಿ ವೇಳೆ ಕಾರ್ಯನಿರ್ವಹಿಸುವ ಸಿಬ್ಬಂದಿಯ ಮಾಹಿತಿಯನ್ನು ಧೃಢೀಕೃತ ಗುರುತಿನ ಚೀಟಿಯೊಂದಿಗೆ ಸಲ್ಲಿಸಬೇಕು.
15. ಲೈಸೆನ್ಸ್ ಇಲ್ಲದ ಔಟ್‌ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ.
16. ಹೋಟೆಲ್ ಕೊಠಡಿಗಳಲ್ಲಿ ಗುಂಪಾಗಿ ಸೇರಿ ನಿಯಮಬಾಹಿರ ಖಾಸಗಿ ಪಾರ್ಟಿ ನಡೆಸುವುದಕ್ಕೆ ಅವಕಾಶವಿಲ್ಲ.
17. ಕಾರ್ಯಕ್ರಮದ ವೇಳೆ ಗಲಾಟೆ ಸಂಭವಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
18. ಕಾರ್ಯಕ್ರಮದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
19. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.


