ಬ್ಯಾಂಗಲ್ ಬಂಗಾರಿ ಚಿತ್ರಕ್ಕೆ ಮುಹೂರ್ತ
‘ಎಕ್ಕಾ’ ಚಿತ್ರದ ಜನಪ್ರಿಯ ‘ಬ್ಯಾಂಗಲ್ ಬಂಗಾರಿ’ ಹಾಡಿನ ಮೊದಲ ಸಾಲೇ ಇದೀಗ ನೂತನ ಕನ್ನಡ ಚಿತ್ರದ ಶೀರ್ಷಿಕೆಯಾಗಿದೆ. ಶಂಕರ್ ರಾಮ್ ರೆಡ್ಡಿ ನಿರ್ಮಾಣದಲ್ಲಿ ಮರಡಿಹಳ್ಳಿ ಚಂದ್ರ ನಾಗ್ ನಿರ್ದೇಶಿಸುತ್ತಿರುವ ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿ ನೆರವೇರಿತು. ಸುನೀಲ್ ಶಶಿಧರ್ ಹಾಗೂ ಪ್ರಕೃತಿ ರಾಜೇಂದ್ರ ನಾಯಕ–ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರವು ಪ್ರೇಮಕಥೆಯೊಂದಿಗೆ ಕ್ರೈಂ ಅಂಶಗಳನ್ನು ಒಳಗೊಂಡಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಯುವ ರಾಜಕುಮಾರ್ ಅಭಿನಯದ ‘ಎಕ್ಕಾ’ ಚಿತ್ರದ ಜನಪ್ರಿಯ ಗೀತೆಯ ಮೊದಲ ಸಾಲು ‘ಬ್ಯಾಂಗಲ್ ಬಂಗಾರಿ’ ಇದೀಗ ನೂತನ ಚಿತ್ರದ ಶೀರ್ಷಿಕೆಯಾಗಿದೆ.
ಶಂಕರ್ ರಾಮ್ ರೆಡ್ಡಿ ನಿರ್ಮಾಣದಲ್ಲಿ ಮರಡಿಹಳ್ಳಿ ಚಂದ್ರ ನಾಗ್ ನಿರ್ದೇಶಿಸುತ್ತಿರುವ ‘ಬ್ಯಾಂಗಲ್ ಬಂಗಾರಿ’ ಚಿತ್ರದ ಮುಹೂರ್ತ ಸಮಾರಂಭ ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ‘ಮುಂಗಾರು ಮಳೆ’ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸಿದರೆ, ಶಾಸಕ ಗೋಪಾಲಯ್ಯ ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರವು ಪ್ರೇಮಕಥೆಯೊಂದಿಗೆ ಕ್ರೈಂ ಅಂಶಗಳನ್ನು ಒಳಗೊಂಡಿದೆ. ಸುನೀಲ್ ಶಶಿಧರ್ ಹಾಗೂ ಪ್ರಕೃತಿ ರಾಜೇಂದ್ರ ನಾಯಕ–ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಸಂಪತ್ ಮೈತ್ರೇಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಟಾಪ್ ಸ್ಟಾರ್ ರೇಣು ಸಂಗೀತ, ಸತೀಶ್ ಕೆ. ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ. ‘ಫುಲ್ ಮೀಲ್ಸ್’ ಚಿತ್ರದ ನಿರ್ದೇಶಕ ಎನ್. ವಿನಾಯಕ ಸಂಭಾಷಣೆ ಬರೆದಿದ್ದಾರೆ. ಕೆ. ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ ಟಾಪ್ ಸ್ಟಾರ್ ರೇಣು ಹಾಡುಗಳನ್ನು ರಚಿಸಿದ್ದಾರೆ.
“ನಾನೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ನಂತರ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ,” ಎಂದು ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ತಿಳಿಸಿದರು.
“ಇದು ನಾಯಕನಾಗಿ ನನ್ನ ಎರಡನೇ ಚಿತ್ರ. ನಾನು ಚಿತ್ರದಲ್ಲಿ ಎಐ ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆಡಿಷನ್ ಮೂಲಕ ಆಯ್ಕೆಯಾಗಿದ್ದು, ನಟನೆಗೆ ಅಗತ್ಯ ತರಬೇತಿ ಪಡೆದಿದ್ದೇನೆ,” ಎಂದು ನಾಯಕ ಸುನೀಲ್ ಶಶಿಧರ್ ಹೇಳಿದರು.
ನಾಯಕಿ ಪ್ರಕೃತಿ ರಾಜೇಂದ್ರ ಅವರು, “ನನ್ನ ಪಾತ್ರದ ಹೆಸರು ಕಾವ್ಯ. ನಿರ್ದೇಶಕರು ಪಾತ್ರದ ಬಗ್ಗೆ ವಿವರಿಸಿದಾಗ ಇಷ್ಟವಾಯಿತು. ನಾನು ಮೂಲತಃ ನೃತ್ಯಗಾರ್ತಿಯಾಗಿದ್ದು, ಈ ಚಿತ್ರದಲ್ಲೂ ನೃತ್ಯ ಮಾಡಲು ಅವಕಾಶವಿದೆ,” ಎಂದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾದ ಕಾರಣ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದಾಗಿ ನಿರ್ಮಾಪಕ ಶಂಕರ್ ರಾಮ್ ರೆಡ್ಡಿ ತಿಳಿಸಿದರು. ಸಂಗೀತ ನಿರ್ದೇಶಕ ಟಾಪ್ ಸ್ಟಾರ್ ರೇಣು, ಛಾಯಾಗ್ರಾಹಕ ಸತೀಶ್, ನಟ ಸಂಪತ್ ಮೈತ್ರೇಯ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


