ಜೀ ಕನ್ನಡದಲ್ಲಿ ಹೊಸ ಧಾರಾವಾಹಿ : ಜಗದ್ಧಾತ್ರಿಯಲ್ಲಿ ಸ್ಟಾರ್‌ಗಳ ಅಬ್ಬರ

ಜೀ ಕನ್ನಡದ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಪ್ರೋಮೋ ಬಿಡುಗಡೆಯಾಗಿದ್ದು, ಮೋಕ್ಷಿತಾ ಪೈ, ವಿಜಯ್‌ ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್‌, ಕೌಟುಂಬಿಕ ಸಂಘರ್ಷ ಮತ್ತು ಭಾವನೆಗಳ ಸಂಗಮವಾಗಿರುವ ಈ ಧಾರಾವಾಹಿಯಲ್ಲಿ ಕವಿತಾ ಗೌಡ ಕಿರುತೆರೆಗೆ ಮರಳಿದ್ದಾರೆ. ಲಕ್ಷ್ಮೀ ಸಿದ್ದಯ್ಯ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 28ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

Sep 27, 2026 - 00:38
Sep 27, 2026 - 00:41
 0
ಜೀ ಕನ್ನಡದಲ್ಲಿ ಹೊಸ ಧಾರಾವಾಹಿ : ಜಗದ್ಧಾತ್ರಿಯಲ್ಲಿ ಸ್ಟಾರ್‌ಗಳ ಅಬ್ಬರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಮುಖ್ಯಾಂಶಗಳು
* ‘ಜಗದ್ಧಾತ್ರಿ’ ಪ್ರೋಮೋ ಬಿಡುಗಡೆ
* ಮೋಕ್ಷಿತಾ ಪೈ ಆಕ್ಷನ್‌ ಅವತಾರ
* ವಿಜಯ್‌ ಸೂರ್ಯ ಪವರ್‌ಫುಲ್‌ ಎಂಟ್ರಿ
* ಕವಿತಾ ಗೌಡ ಕಿರುತೆರೆಗೆ ಕಮ್‌ಬ್ಯಾಕ್‌
* ದಶಕದ ಬಳಿಕ ಕಲಾವಿದರ ಮರುಸಂಗಮ

ಬೆಂಗಳೂರು: ಕಿರುತೆರೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ‘ಜಗದ್ಧಾತ್ರಿ’ ಧಾರಾವಾಹಿಯ ಪವರ್‌ಫುಲ್‌ ಪ್ರೋಮೋ ಬಿಡುಗಡೆಯಾಗಿದೆ. ಮೋಕ್ಷಿತಾ ಪೈ ಮತ್ತು ವಿಜಯ್‌ ಸೂರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಆಕ್ಷನ್‌, ಕೌಟುಂಬಿಕ ಸಂಘರ್ಷ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ಧಾರಾವಾಹಿ ಮೂಡಿಬರುವ ಸುಳಿವನ್ನು ಪ್ರೋಮೋ ನೀಡಿದೆ ಎಂದು ಜ಼ೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೇಳಿದರು.

ಶನಿವಾರ ಕಂಠೀರವ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸೆಪ್ಟೆಂಬರ್ 28 ರಿಂದ ಪ್ರತಿದಿನ ರಾತ್ರಿ 9-00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ ಎಂದರು.

ನಟಿ ಮೋಕ್ಷಿತಾ ಪೈ ಮಾತನಾಡಿ ಸಾಂಪ್ರದಾಯಿಕ ಉಡುಗೆಯಲ್ಲಿ ಮನೆಯೊಳಗೆ ಮುಗ್ಧ ಹುಡುಗಿಯಾಗಿ ಕಾಣಿಸಿಕೊಳ್ಳುವ ಜಗದ್ಧಾತ್ರಿ, ಹೊಸ್ತಿಲು ದಾಟಿದ ಬಳಿಕ ಖಳನಾಯಕರಿಗೆ ಸಿಂಹಸ್ವಪ್ನವಾಗುವ ಆಕ್ಷನ್‌ ಕ್ವೀನ್‌ ಆಗಿ ಬದಲಾಗುತಾಳೆ ಈ ವಿಭಿನ್ನ ಪಾತ್ರದಲ್ಲಿ ನಾನು ನಟಿಸಿದ್ದೇನೆ ಎಂದರು.

ನಟ ವಿಜಯ್‌ ಸೂರ್ಯ ಮಾತನಾಡಿ ಜಗದ್ಧಾತ್ರಿಗೆ ಬೆಂಬಲವಾಗಿ ನಿಲ್ಲುವ ಸೂಪರ್‌ ಹೀರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ, ಖಳನಟನಾಗಿ ವಚನ ಕಾಣಿಸಿಕೊಂಡಿದ್ದಾರೆ ಎಂದರು.

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಕಲಾವಿದರಾದ ಲಕ್ಷ್ಮೀ ಸಿದ್ದಯ್ಯ ಮತ್ತು ಕವಿತಾ ಗೌಡ ಮಾತನಾಡಿ ನಾವಿಬ್ಬರು ಮತ್ತೆ ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು. ‘ಲಕ್ಷ್ಮೀ ಬಾರಮ್ಮ’ದಲ್ಲಿ ಕಲ್ಪನಾ ಮತ್ತು ಚಿನ್ನು ಪಾತ್ರಗಳ ಮೂಲಕ ಜನಪ್ರಿಯರಾಗಿದ್ದ ಇವರಿಬ್ಬರು, ಇದೀಗ ಹೊಸ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದರು.

ಧಾರಾವಾಹಿಯ ತಾರಾಬಳಗವೂ ವಿಶೇಷವಾಗಿದೆ. ಹಿರಿಯ ನಟಿ ಗಿರಿಜಾ ಲೋಕೇಶ್‌ ಜಗದ್ಧಾತ್ರಿಯ ಅಜ್ಜಿಯ ಪಾತ್ರದಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಸಿದ್ದಯ್ಯ ಅವರು ಚಿಕ್ಕಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಮೃತಧಾರೆ’ಯಲ್ಲಿ ಅಶ್ವಿನಿ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಚಂದನಾ, ಇಲ್ಲಿ ಜಗದ್ಧಾತ್ರಿಯ ಮಲಸಹೋದರಿಯಾಗಿ ನಟಿಸಿದ್ದಾರೆ.

ಮದುವೆ ಮತ್ತು ಮಗುವಿನ ಬಳಿಕ ಕಿರುತೆರೆಯಿಂದ ವಿರಾಮ ಪಡೆದಿದ್ದ ಕವಿತಾ ಗೌಡ, ‘ಜಗದ್ಧಾತ್ರಿ’ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಧ್ವನಿ ಎಂಬ ಮಗುವಿನ ತಾಯಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಸುಮಾರು ಒಂದು ದಶಕದ ಬಳಿಕ ಇಬ್ಬರೂ ಮತ್ತೆ ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಒಟ್ಟಿನಲ್ಲಿ, ಆಕ್ಷನ್‌, ಕೌಟುಂಬಿಕ ಸಂಘರ್ಷ, ಭಾವನೆಗಳು ಹಾಗೂ ಜನಪ್ರಿಯ ಕಲಾವಿದರ ಸಂಗಮದೊಂದಿಗೆ ‘ಜಗದ್ಧಾತ್ರಿ’ ಪ್ರೋಮೋ ಕಿರುತೆರೆ ವೀಕ್ಷಕರ ಗಮನ ಸೆಳೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್‌, ನಟ ವಿಜಯ್‌ ಸೂರ್ಯ, ಖಳ ನಟ ವಚನ್, ನಟಿ ಕವಿತಾ ಗೌಡ, ಮೋಕ್ಷಿತಾ ಪೈ, ಲಕ್ಷ್ಮೀ ಸಿದ್ದಯ್ಯ, ಪ್ರೋಗ್ರಾಮಿಂಗ್ ಹೆಡ್  ಭಾಸ್ಕರ್ ಅಯ್ಯರ್ ಮತ್ತು ಫಿಕ್ಷನ್ ಹೆಡ್ ಚೇತನ್ ಸೊಲಗಿ ಉಪಸ್ಥಿತರಿದ್ದರು.


ದಶಕದ ಬಳಿಕ ಮತ್ತೆ ಒಂದಾದ ಜೋಡಿ :
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಕಲ್ಪನಾ ಮತ್ತು ಚಿನ್ನು ಪಾತ್ರಗಳ ಮೂಲಕ ಜನಪ್ರಿಯರಾಗಿದ್ದ ನಟಿಯರಾದ ಲಕ್ಷ್ಮೀ ಸಿದ್ದಯ್ಯ ಹಾಗೂ ಕವಿತಾ ಗೌಡ, ಇದೀಗ ‘ಜಗದ್ಧಾತ್ರಿ’ಯಲ್ಲಿ ಹೊಸ ಪಾತ್ರಗಳೊಂದಿಗೆ ಮತ್ತೆ ಒಂದಾಗಿದ್ದಾರೆ. ಸುಮಾರು ಹತ್ತು ವರ್ಷಗಳ ಬಳಿಕ ಇವರಿಬ್ಬರು ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.


ಆಕ್ಷನ್‌, ಕೌಟುಂಬಿಕ ಸಂಘರ್ಷ ಮತ್ತು ಭಾವನೆಗಳ ಜತೆಗೆ ವಿಭಿನ್ನ ಪಾತ್ರಗಳ ಮೂಲಕ ವೀಕ್ಷಕರನ್ನು ಸೆಳೆಯುವ ಪ್ರಯತ್ನವನ್ನು ‘ಜಗದ್ಧಾತ್ರಿ’ ಮಾಡುತ್ತಿದೆ. ಸೆಪ್ಟೆಂಬರ್ 28 ರಿಂದ ಪ್ರತಿದಿನ ರಾತ್ರಿ 9-00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ.

•ದೀಪಕ್ ಶ್ರೀರಾಮುಲು,
ಜ಼ೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.