ಸೀತಾ ರಾಮ ರಾಜು–ದರ್ಶನ ಸೇರಿ ಮೂರು ಚಿತ್ರಗಳಿಗೆ ಚಾಲನೆ

ಬೆಂಗಳೂರು ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಸೀತಾ ರಾಮ ರಾಜು’, ‘ದರ್ಶನ’ ಸೇರಿದಂತೆ ಮೂರು ಕನ್ನಡ ಚಿತ್ರಗಳಿಗೆ ಒಂದೇ ವೇದಿಕೆಯಲ್ಲಿ ಭರ್ಜರಿ ಚಾಲನೆ ನೀಡಲಾಯಿತು. ನಿರ್ಮಾಪಕ ಅರುಣ್ ಕುಮಾರ್ ಹಾಗೂ ಸಹ ನಿರ್ಮಾಪಕಿ ಭವ್ಯ ಅವರ ಮುಂದಾಳತ್ವದಲ್ಲಿ ಆರಂಭಗೊಂಡ ಈ ಚಿತ್ರಗಳು ವಿಭಿನ್ನ ಕಥಾಹಂದರಗಳೊಂದಿಗೆ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಕಾರ್ತೀಕ್ ಮಹೇಶ್, ಪೃಥ್ವಿ ಅಂಬಾರ್, ಪ್ರಿಯಾಂಕಾ ಕುಮಾರ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರತಂಡವು ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲು ಸಜ್ಜಾಗಿದೆ.

Apr 7, 2026 - 12:41
Apr 7, 2026 - 12:54
 0
ಸೀತಾ ರಾಮ ರಾಜು–ದರ್ಶನ ಸೇರಿ ಮೂರು ಚಿತ್ರಗಳಿಗೆ ಚಾಲನೆ


ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಂಗಳೂರು : ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ನಿರ್ಮಾಪಕ ಅರುಣ್ ಕುಮಾರ್ ಅವರ ಮುಂದಾಳತ್ವದಲ್ಲಿ ಈ ಚಿತ್ರಗಳ ಪ್ರಾರಂಭೋತ್ಸವ ನಡೆಯಿತು.

ಕೀರ್ತಿ ಕೃಷ್ಣ ನಿರ್ದೇಶನದ ಸೀತಾ ರಾಮ ರಾಜು, ಸ್ವಸ್ತಿಕ್ ನಿರ್ದೇಶನದ ದರ್ಶನ ಹಾಗೂ ನಿರ್ದೇಶಕ ಕುಮಾರ್ ಅವರ ಇನ್ನೂ ಹೆಸರಿಡದ ಚಿತ್ರದ ಮುಹೂರ್ತ ಸಮಾರಂಭ ಒಂದೇ ವೇದಿಕೆಯಲ್ಲಿ ನೆರವೇರಿತು.

ಸೀತಾ ರಾಮ ರಾಜು ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತೀಕ್ ಮಹೇಶ್ ನಾಯಕನಾಗಿ ನಟಿಸುತ್ತಿದ್ದು, ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆರ್ಮುಗಂ ರವಿಶಂಕರ್, ಜಗಪ್ಪ ಹಾಗೂ ‘ಮಹಾನಟಿ’ ಖ್ಯಾತಿಯ ದೀಪಿಕಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕೀರ್ತಿ ಕೃಷ್ಣ, “ಸೀತಾ–ರಾಮರ ಜೊತೆಗೆ ಹನುಮಂತನ ರೂಪದಲ್ಲಿ ರಾಜು ಪಾತ್ರವೂ ಮೂಡಿಬರುತ್ತದೆ. ಚಿಕ್ಕಮಗಳೂರು–ಬೆಂಗಳೂರು ಸುತ್ತ ನಡೆಯುವ ಕಥೆಯಿದು,” ಎಂದರು.

ನಿರ್ಮಾಪಕ ಅರುಣ್ ಕುಮಾರ್, “ಚಿತ್ರ ನಿರ್ಮಾಣ ಮಾಡುವ ಆಸೆ ಹಲವು ವರ್ಷಗಳದ್ದು. ಹಲವು ಕಥೆಗಳನ್ನು ಕೇಳಿ ಈಗ ಅವು ಕಾರ್ಯರೂಪಕ್ಕೆ ಬರುತ್ತಿವೆ,” ಎಂದರು. ಸಹ ನಿರ್ಮಾಪಕಿ ಭವ್ಯ ಅರುಣ್ ಕುಮಾರ್, “ಅನೇಕ ಕಥೆಗಳಲ್ಲಿಂದ ಆಯ್ಕೆ ಮಾಡಿದ ಮೂರು ಕಥೆಗಳು ನಮ್ಮನ್ನು ಹೆಚ್ಚು ಸೆಳೆದವು,” ಎಂದು ಹೇಳಿದರು.

ನಾಯಕ ಕಾರ್ತೀಕ್ ಮಹೇಶ್, “ಒಂದೇ ದಿನ ಮೂರು ಸಿನಿಮಾಗಳ ಪ್ರಾರಂಭ ದೊಡ್ಡ ವಿಚಾರ. ಈ ಕಥೆ ನನಗೆ ವಿಶೇಷವಾಗಿ ಕಾಡಿದೆ. ಇದರಲ್ಲಿ ಸುಂದರ ಲವ್ ಸ್ಟೋರಿ ಇದೆ,” ಎಂದರು. ನಾಯಕಿ ಪ್ರಿಯಾಂಕಾ ಕುಮಾರ್, “ಇದು ಭಾವನಾತ್ಮಕ ಪ್ರೇಮಕಥೆ. ನನ್ನ ಪಾತ್ರದಲ್ಲಿ ಹಲವು ಆಯಾಮಗಳಿವೆ,” ಎಂದು ತಿಳಿಸಿದರು. ನಟ ರವಿಶಂಕರ್, “ನಿರ್ದೇಶಕ ಕೀರ್ತಿ ಪರಿಶ್ರಮಿ. ಕಥೆ ಹಾಗೂ ಸಂಭಾಷಣೆಗಳು ಆಕರ್ಷಕವಾಗಿವೆ,” ಎಂದು ಹೇಳಿದರು. ಸಂಭಾಷಣೆಗಾರ ಕ್ರಾಂತಿಕುಮಾರ್, ಸಂಗೀತ ನಿರ್ದೇಶಕ ರಾಘವೇಂದ್ರ ವಿ, ಛಾಯಾಗ್ರಾಹಕ ಅಭಿಲಾಶ್ ಕಳತಿ ತಮ್ಮ ಕೆಲಸದ ಕುರಿತು ವಿವರಿಸಿದರು.

ಇದೇ ಸಂದರ್ಭದಲ್ಲಿ ಸ್ವಸ್ತಿಕ್ ನಿರ್ದೇಶನದ ದರ್ಶನ ಚಿತ್ರಕ್ಕೂ ಚಾಲನೆ ನೀಡಲಾಯಿತು. ಚೌಕೀದಾರ್ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿದ್ದು, ನಿಶಾ ರವೀಂದ್ರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. “ಇದು ಕಾಮಿಡಿ–ಡ್ರಾಮಾ ಜಾನರ್‌ನ ಚಿತ್ರ. ಇದೇ ತಿಂಗಳ 8ರಿಂದ ಚಿತ್ರೀಕರಣ ಆರಂಭಿಸುತ್ತೇವೆ,” ಎಂದು ನಿರ್ದೇಶಕ ಸ್ವಸ್ತಿಕ್ ಹೇಳಿದರು. ಗೌರವ ಶೆಟ್ಟಿ, ಸಂತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ನಾಯಕ ಪೃಥ್ವಿ ಅಂಬಾರ್ ತಮ್ಮ ಪಾತ್ರದ ಬಗ್ಗೆ ವಿವರಿಸಿದರೆ, ನಾಯಕಿ ನಿಶಾ ರವೀಂದ್ರ “ಪ್ರೀತಿ ಎಂಬ ಕ್ಯೂಟ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತೇನೆ,” ಎಂದರು. ನಟ ತಬಲಾನಾಣಿ, “ಬಂಗಾರಪ್ಪ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎರಡು ಹೆಣ್ಣು ಮಕ್ಕಳ ತಂದೆಯಾಗಿದ್ದೇನೆ,” ಎಂದು ಹೇಳಿದರು.

ಇದೇ ವೇದಿಕೆಯಲ್ಲಿ ನಿರ್ದೇಶಕ ಕುಮಾರ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೂ ಚಾಲನೆ ದೊರೆಯಿತು. ಈ ಚಿತ್ರದಲ್ಲಿ ತಬಲಾನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಎದ್ದೇಳು ಮಂಜುನಾಥ ಚಿತ್ರದ ಪಾತ್ರ ನನ್ನ ಮನಸ್ಸಿನಲ್ಲಿ ಉಳಿದಿತ್ತು. ಅದೇ ಪಾತ್ರವನ್ನು ಹೊಸ ಕಥೆಯಲ್ಲಿ ಮುಂದುವರಿಸುತ್ತಿದ್ದೇವೆ. ಪ್ರೇಕ್ಷಕರನ್ನು ನಗಿಸುವ ಉದ್ದೇಶದ ಚಿತ್ರ,” ಎಂದು ನಿರ್ದೇಶಕ ಕುಮಾರ್ ಹೇಳಿದರು.

ಮೂರೂ ಚಿತ್ರಗಳು ವಿಭಿನ್ನ ಕಥಾಹಂದರ ಹೊಂದಿದ್ದು, ಒಂದೇ ದಿನ ಪ್ರಾರಂಭವಾಗಿರುವುದು ವಿಶೇಷವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.