ಬಾಲ್ಯ ವಿವಾಹ ತಡೆಗೆ ಕೈ ಜೋಡಿಸಿ : ಸಂಗಮೇಶ ಬಬಲೇಶ್ವರ
Join hands to prevent child marriage: Sangamesh Babaleswar
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಠ ಪಿಡುಗುಗಳ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರು, ಪೋಷಕರು ಹಾಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಬೇಕು. ಅದರಂತೆ ಜಿಲ್ಲೆಯ ವಸತಿ ನಿಲಯಗಳ ವಾರ್ಡ್ನ ಹಾಗೂ ಶಾಲಾ ಶಿಕ್ಷಕರು ಈ ಕಾಯ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವ್ಯಾಪಕ ಜಾಗೃತಿ ಮೂಡಿಸಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯ ವಿವಾಹ ತಡೆಗೆ ಕೈಜೊಡಿಸಬೇಕು ಎಂದು ಧಾರವಾಡದ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಅವರು ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮ0ದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬಾಲ್ಯ ವಿವಾಹ-ಫೋಕ್ಸೊ ಕಾಯ್ದೆ ಹಾಗೂ ಮಕ್ಕಳ ಸಂರಕ್ಷಣಾ ಕಾಯ್ದೆಗಳ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಅತ್ಯಂತ ಮಾದರಿಯಾಗಿದೆ. ಮಕ್ಕಳ ರಕ್ಷಣೆಗಾಗಿ ಇರುವ ಬಾಲ್ಯ ವಿವಾಹ-ಫೋಕ್ಸೊ ಕಾಯ್ದೆ, ಬಾಲ ಕಾರ್ಮಿಕ ತಡೆ ಕಾಯ್ದೆಗಳ ಕುರಿತಾಗಿ ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಿಳಿಸಿಕೊಡುತ್ತಿರುವ ಈ ಕಾರ್ಯಾಗಾರ ಅತ್ಯಂತ ಸಮಂಜಸವಾಗಿದೆ.ಮಕ್ಕಳ ಹಿತಕಾಯುವಲ್ಲಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಜವಾಬ್ದಾರಿ ಅರಿತು ಮಕ್ಕಳ ಒಳಿತಿಗಾಗಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ಐತಿಹಾಸಿಕ ಹಿನ್ನೆಲೆ ಇರುವ ನಮ್ಮ ಹೆಮ್ಮೆಯ ಜಿಲ್ಲೆಯಲ್ಲಿ ಸಂಪೂರ್ಣ ಬಾಲಕಾರ್ಮಿಕ, ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲ ಮಕ್ಕಳನ್ನು ಶಾಲಾ ದಾಖಲಾತಿ ಮಾಡಿಸುವ ಮೂಲಕ ಶಾಲೆಯಿಂದ ಯಾವುದೇ ಮಗು ಹೊರಗುಳಿಯದಂತೆ ಸಂಬ0ಧಿಸಿದ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿ, ಶಾಲೆಬಿಟ್ಟ ಮಕ್ಕಳ ಮಾಹಿತಿ ಕ್ರೋಢಿಕರಿಸಬೇಕು. ಈ ಬಗ್ಗೆ ಪಾಲಕರಿಗೆ ತಿಳುವಳಿಕೆ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸುಂದರಗೊಳಿಸಿಕೊ0ಡು ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ವಸತಿ ನಿಲಯಗಳಲ್ಲಿ ಮಕ್ಕಳ ರಕ್ಷಣೆಯ ಕುರಿತು ಅತ್ಯಂತ ಕಾಳಜಿವಹಿಸಿ ಕಾರ್ಯ ನಿರ್ವಹಿಸಬೇಕು. ಪಾಲಕರು ಗಂಡು-ಹೆಣ್ಣು ಎಂಬ ಭೇದವೆಣಿಸದೇ ಮಕ್ಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಬೇಕು. ಈ ಕಾರ್ಯಕ್ರಮದಲ್ಲಿ ಮಕ್ಕಳ ಸಂರಕ್ಷಣೆಯಲ್ಲಿರುವ ವಿವಿಧ ಕಾಯ್ದೆ, ಕಾನೂನು ಕುರಿತು ವಿಷಯ ತಜ್ಞರು ಇಲ್ಲಿ ವ್ಯಕ್ತಪಡಿಸುವ ಮಾಹಿತಿಯನ್ನು ಪೂರಕವಾಗಿ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಮಕ್ಕಳ ಕ್ಷೇತ್ರಗಳ ಕಾಯ್ದೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಅಗತ್ಯವಾಗಿದೆ. ನಮಗೆ ಹಾಕಿಕೊಟ್ಟ ಕಾರ್ಯನಿರ್ವಹಣೆಯ ಪರಿಧಿಯನ್ನು ಹೊರತುಪಡಿಸಿ, ಸಾಮಾಜಿಕ ಕಳ-ಕಳಿಯ ಹೊಂದಿ, ಸಮಾಜಮುಖಿಯಾಗಿ ಹಾಗೂ ಮಕ್ಕಳ ಹಿತದೃಷ್ಟಿಯಿಂದ ನಾವೆಲ್ಲರೂ ಕಾರ್ಯನಿರ್ವಹಿಸಿ, ಸಾಮಾಜಿಕ ಬದ್ಧತೆಯನ್ನು ಮೆರೆಯೋಣ.ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಅರಿತುಕೊಂಡು ಪರಿಹರಿಸಿ ಎಂದು ಹೇಳಿದರು.
ಬಾಲ್ಯವಿವಾಹ ಸೇರಿದಂತೆ ಅನಿಷ್ಟ ಪದ್ಧತಿ ಕುರಿತ ಸಾರ್ವಜನಿಕರು ಜಾಗೃತಿ ಹೊಂದುವುದು ಅಗತ್ಯವಾಗಿದೆ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ, ಮಕ್ಕಳ ಮನಸ್ಸನ್ನು ಅರಿತು ಸಮಸ್ಯೆ ಪರಿಹರಿಸುವ ಮೂಲಕ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬದಲಾವಣೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು.ಶಿಕ್ಷಕರು ಮಕ್ಕಳ ವರ್ತನಾ ಬದಲಾವಣೆ ಅವಲೋಕಿಸಿ ಸೂಕ್ಷö್ಮವಾಗಿ ಗ್ರಹಿಸಿ,ಅವರಿಗೆ ಸೂಕ್ತ ಸಲಹೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಲಿಂಗಾನುಪಾತ ಬಗ್ಗೆ ಜಾಗೃತಿ ಮೂಡಿಸಬೇಕು. ಗಂಡು-ಹೆಣ್ಣು ಎಂಬ ಲಿಂಗ ತಾರತಮ್ಯ ತೊಡೆದು ಹಾಕಲು ಶ್ರಮಿಸಿ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ಯೆ ಸೇರಿದಂತೆ ವಿವಿಧ ಅನಿಷ್ಠ ಪದ್ಧತಿ ಹೋಗಲಾಡಿಸಲು, ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಯಮಿತವಾಗಿ ಕಾವಲು ಸಮಿತಿ ನಡೆಸಿ, ಸ್ಥಳೀಯವಾಗಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಗ್ರಾಮ ಹಂತದಲ್ಲಿ ಸಭೆ ನಡೆಸುವುದು ಅತ್ಯಂತ ಮಹತ್ವದಾಗಿದೆ. ಈ ಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವಿಕೆಯಿಂದ ಕಾನೂನು ಅರಿವು ಹೊಂದಿ ಇಂತಹ ಪ್ರಕರಣ ಇಳಿಮುಖವಾಗಲು ಸಾಧ್ಯವಾಗುತ್ತದೆ. ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ ೧೦೯೮ ದೂರು ಕರ ಮಾಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಇದರ ಪ್ರಕ್ರಿಯೆ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾನಸಿಕ ಖಿನ್ನತೆಗೆ ಸಮಬಂಧಿಸಿದ ಪರಿಹಾರ ದೊರಕಿಸಿಕೊಡುವ ಟೆಲಿ ಮನಸ್ ಉಚಿತ ಸಹಾವಾಣಿ ಸಂಖ್ಯೆ ೧೪೪೧೬ ಸಂಪರ್ಕಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಮಕ್ಕಳ ಸಂರಕ್ಷಣಾ ಕಾಯ್ದೆಗಳ ಕುರಿತು ತಿಳಿದುಕೊಂಡು, ಮಕ್ಕಳ ಹಿತದೃಷ್ಟಿಯಿಂತ ತಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ ಮಾತನಾಡಿ, ಮಕ್ಕಳಿಗೆ ಪಠ್ಯ ಬೋಧನೆ ಜೊತೆಗೆ ಮಕ್ಕಳಲ್ಲಿ ಸಂಸ್ಕೃತಿ,ಮಕ್ಕಳ ರಕ್ಷಣೆಗಾಗಿ ಇರುವ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕು. ಶಾಲೆಯಲ್ಲಿ ನಡೆಯುವ ಪಾಲಕರ ಸಭೆಯಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು. ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಕಾರ್ಯಾಗಾರದಲ್ಲಿನ ಮಾಹಿತಿಯನ್ನು ಮನೆ-ಮನೆಗೂ ಹಾಗೂ ಮಗು-ಮಗುವಿಗೂ ತಲುಪಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರು ಮಾತನಾಡಿ, ಸೈಬರ್ ಅಪರಾಧದ ಕುರಿತು ಜಾಗೃತಿ ಹೊಂದುವುದು ಅತಿ ಅಗತ್ಯವಾಗಿದೆ. ಆನ್‌ಲೈನ್ ಆ್ಯಪ್ ನಂಬಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ವಿವಿಧ ಸೈಬರ್ ಅಪರಾಧಗಳ ಕುರಿತು ಪಿಪಿಟಿಯ ಮೂಲಕ ವಿಸ್ತೃತವಾಗಿ ವಿವರಿಸಿದ ಅವರು ವಂಚಕರು ಎಸಗುವ ಆಮಿಷಕ್ಕೆ ಒಳಗಾಗದೇ ಸಾರ್ವಜನಿಕರು ಜಾಗೃತಿ ವಹಿಸಬೇಕು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಸೈಬರ ಅಪರಾಧದ ಕುರಿತು ಜಾಗೃತಿ ಹೊಂದಿ, ಸೈಬರ್ ವಂಚಕರಿ0ದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಸೈಬರ್ ವಂಚನೆಗೆ ಒಳಗಾದ ಸಂದರ್ಭದಲ್ಲಿ ೧೯೩೦ ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ವಸತಿ ನಿಲಯ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ಮಕ್ಕಳ ಕಲ್ಯಾಣಕ್ಕಾಗಿ ಒಗ್ಗೂಡಿ ಕಾರ್ಯನಿರ್ವಹಿಸೋಣ. ಕಾಯ್ದೆಗಳ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಕಾಳಜಿಪೂರ್ವಕವಾಗಿ ಕಾರ್ಯನಿರ್ವಹಿಸಿ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ಖುದ್ದಾಗಿ ಸಂಪರ್ಕಿಸುವ0ತೆ ಹೇಳಿದರು.
ನ್ಯಾಯವಾದಿಗಳೂ ಆದ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಧರ ಕುಲಕರ್ಣಿ ಅವರು, ಬಾಲ್ಯ ವಿವಾಹ ಕಾಯ್ದೆ ಬಗ್ಗೆ, ನ್ಯಾಯವಾದಿಗಳೂ ಆದ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರಶಾಂತ ದೇಶಪಾಂಡೆ ಅವರು ಫೋಕ್ಷೆ ಕಾಯ್ದೆಯ ಕುರಿತಾಗಿ, ಕಾರ್ಮಿಕ ಅಧಿಕಾರಿ ಶ್ರೀಮತಿ ಉಮಾಶ್ರೀ ಕೋಳಿ ಅವರು ಬಾಲ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆಯ ಬಗ್ಗೆ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಆತ್ಮಹತ್ಯೆ ತಡೆ ವಿಷಯದ ಕುರಿತಾಗಿ ಮನೋವೈದ್ಯ ಡಾ.ಮಂಜುನಾಥ ಮಸಳಿ ಅವರು ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಬಸಮ್ಮ ಹತ್ತರಕಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪುಂಡಲಿಕ ಮಾನವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ ಹೊಸಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಮತಿ ಉಮಾಶ್ರೀ ಕೋಳಿ, ವಾರ್ತಾಧಿಕಾರಿ ಅಮರೇಶ ದೊಡಮನಿ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ವಸತಿ ನಿಲಯಗಳ ವಾರ್ಡ್ನ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


