ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಲೋಕಾರ್ಪಣೆಗೊಳಿಸಿದ ಮಾಜಿ ಸಚಿವ ಡಾ. ಮುರುಗೇಶ ನಿರಾಣಿ
ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಅವರು ತಮ್ಮ ನಿವಾಸದಲ್ಲಿ ‘ಅಪರಾಧಕ್ಕೆ ಸವಾಲು’ ಕನ್ನಡ ದಿನಪತ್ರಿಕೆಯ 2026ನೇ ಸಾಲಿನ ‘ಯುಗಾದಿ ವಿಶೇಷಾಂಕ’ವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮವು ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿಯಾಗಬೇಕು ಎಂದು ಆಶಿಸಿದರು. ವಿಶೇಷಾಂಕದಲ್ಲಿ ಪ್ರಕಟವಾಗಿರುವ ತಮ್ಮ ಜೀವನ ಚರಿತ್ರೆಯ ಲೇಖನ ಹಾಗೂ ಪತ್ರಿಕೆಯ ಗುಣಮಟ್ಟದ ವಿನ್ಯಾಸಕ್ಕೆ ಫಿದಾ ಆದ ನಿರಾಣಿ ಅವರು, ಸಂಪಾದಕ ಟಿ.ಕೆ. ಮಲಗೊಂಡ ಅವರ ಮೂರು ದಶಕಗಳ ಹರಿತವಾದ ಬರವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಸನ್ಮಾನಿಸಿದರು.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
•ಪತ್ರಿಕೋದ್ಯಮ ಸಮಾಜದ ಕನ್ನಡಿಯಾಗಲಿ
•ಸಂಪಾದಕ ಟಿ.ಕೆ. ಮಲಗೊಂಡಗೆ ಸನ್ಮಾನ
ಮುಧೋಳ: ‘ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಬೇಕು. ಜನಸಾಮಾನ್ಯರ ಧ್ವನಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಪತ್ರಿಕೆಗಳು ಪ್ರಜಾಪ್ರಭುತ್ವದ ಶಕ್ತಿಯಾಗಿವೆ. ಈ ನಿಟ್ಟಿನಲ್ಲಿ ಅಪರಾಧಕ್ಕೆ ಸವಾಲು ಪತ್ರಿಕೆಯು ದಶಕಗಳಿಂದಲೂ ಜನಪರ ಕಾಳಜಿಯೊಂದಿಗೆ ನಿಷ್ಠಾವಂತ ಪತ್ರಿಕೋದ್ಯಮ ನಡೆಸುತ್ತಾ ಬಂದಿರುವುದು ಶ್ಲಾಘನೀಯ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಹೇಳಿದರು.
ಮಾರ್ಚ್ 17/2026 ಮಂಗಳವಾರ ಇಲ್ಲಿನ ತಮ್ಮ ನಿವಾಸದಲ್ಲಿ ‘ಅಪರಾಧಕ್ಕೆ ಸವಾಲು’ ಕನ್ನಡ ದಿನಪತ್ರಿಕೆಯ 2026ನೇ ಸಾಲಿನ ‘ಯುಗಾದಿ ವಿಶೇಷಾಂಕ’ ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜೀವನ ಚರಿತ್ರೆಗೆ ಮೆಚ್ಚುಗೆ:
ವಿಶೇಷಾಂಕದಲ್ಲಿ ಪ್ರಕಟವಾಗಿರುವ ‘ಸಕ್ಕರೆ ಉದ್ಯಮಿ ಡಾ. ಮುರುಗೇಶ ನಿರಾಣಿ’ ಶೀರ್ಷಿಕೆಯ ಲೇಖನವನ್ನು ಓದಿದ ಅವರು, ಅತ್ಯಂತ ಸಂತಸ ವ್ಯಕ್ತಪಡಿಸಿದರು. ತಮ್ಮ ಜೀವನದ ಹಾದಿ, ಸಾಧನೆ ಹಾಗೂ ಉದ್ದಿಮೆಯ ಏರಿಳಿತಗಳನ್ನು ಅತ್ಯಂತ ನೈಜವಾಗಿ ಮತ್ತು ಸವಿಸ್ತಾರವಾಗಿ ಲೇಖನದಲ್ಲಿ ಸೆರೆಹಿಡಿದಿರುವುದನ್ನು ಕಂಡು ಮೆಚ್ಚುಗೆ ಸೂಚಿಸಿದ ಅವರು, ಲೇಖನದ ಗುಣಮಟ್ಟಕ್ಕೆ ಫಿದಾ ಆದರು.
ಮುಖಪುಟ ವಿನ್ಯಾಸಕ್ಕೆ ಅಭಿನಂದನೆ :
ಸಂಚಿಕೆಯನ್ನು ಲೋಕಾರ್ಪಣೆಗೊಳಿಸುತ್ತಿದ್ದಂತೆ ಅದರ ಆಕರ್ಷಕ ಮುಖಪುಟ ವಿನ್ಯಾಸವನ್ನು ಗಮನಿಸಿದ ನಿರಾಣಿ ಅವರು, "ಒಂದು ವೃತ್ತಿಪರ ಪತ್ರಿಕೆಯ ಮುಖಪುಟ ಹೇಗಿರಬೇಕೋ ಹಾಗೆ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂದಿದೆ. ನೋಡುಗರನ್ನು ಸೆಳೆಯುವ ಬಣ್ಣಗಳ ಬಳಕೆ ಮತ್ತು ಶೀರ್ಷಿಕೆಗಳ ಜೋಡಣೆ ಅದ್ಭುತವಾಗಿದೆ" ಎಂದು ತಂಡವನ್ನು ಅಭಿನಂದಿಸಿದರು.
ಬರಹಕ್ಕೆ ಸಂದ ಗೌರವ:
‘ಕಳೆದ ಮೂರು ದಶಕಗಳಿಂದ ಭೀಮಾತೀರದ ನೈಜ ಸ್ಥಿತಿಗತಿಗಳು ಹಾಗೂ ಅಲ್ಲಿನ ವಿದ್ಯಮಾನಗಳ ಕುರಿತು ಹಿರಿಯ ಪತ್ರಕರ್ತ ಟಿ.ಕೆ. ಮಲಗೊಂಡ ಅವರು ನಡೆಸುತ್ತಿರುವ ಹರಿತವಾದ ಬರವಣಿಗೆ ಮೆಚ್ಚುವಂತದ್ದು. ಸಂಶೋಧನಾತ್ಮಕ ವರದಿಗಳ ಮೂಲಕ ಅವರು ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ’ ಎಂದು ಶ್ಲಾಘಿಸಿದ ಅವರು, ಇದೇ ಸಂದರ್ಭದಲ್ಲಿ ಸಂಪಾದಕ ಟಿ.ಕೆ. ಮಲಗೊಂಡ ಅವರಿಗೆ ಸನ್ಮಾನಿಸಿ ಗೌರವಿಸಿದರು.
ರೈತರ ಹಿತರಕ್ಷಣೆ ಮುಖ್ಯ:
‘ಕಬ್ಬಿನ ದರ ಏರಿಕೆಯಾದಂತೆ ಮಾರುಕಟ್ಟೆಯಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಕೂಡ ಏರಿಕೆಯಾಗಬೇಕು ಎಂಬುದು ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಾಯವಾಗಿದೆ. ಸಕ್ಕರೆ ಬೆಲೆ ಹೆಚ್ಚಳವಾದರೆ ಮಾತ್ರ ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಬಾಕಿ ಹಣ ಪಾವತಿಸಲು ಅನುಕೂಲವಾಗುತ್ತದೆ’ ಎಂದು ಅವರು ರೈತರು ಮತ್ತು ಉದ್ದಿಮೆಯ ನಡುವಿನ ಸಂಬಂಧವನ್ನು ವಿವರಿಸಿದರು.
ಸರಳ ಸಜ್ಜನಿಕೆ:
ಇದಕ್ಕೂ ಮುನ್ನ ಸಂಪಾದಕ ಟಿ.ಕೆ. ಮಲಗೊಂಡ ಅವರು ಮಾಜಿ ಸಚಿವರೊಂದಿಗೆ ಸೌಹಾರ್ದಯುತವಾಗಿ ಉಪಹಾರ ಸೇವಿಸಿದರು. ಈ ವೇಳೆ ಮುರುಗೇಶ ನಿರಾಣಿ ಅವರು ತೋರಿದ ಅತಿಥಿ ಸತ್ಕಾರ ಹಾಗೂ ರೈತರ ಏಳಿಗೆಗಾಗಿ ಅವರಲ್ಲಿರುವ ದೂರದೃಷ್ಟಿಯ ಕಾಳಜಿಯನ್ನು ಸ್ಥಳದಲ್ಲಿದ್ದ ಎಂಆರ್‌ಎನ್ ಸಮೂಹ ಸಂಸ್ಥೆಯವರು ಮುಕ್ತಕಂಠದಿಂದ ಸ್ತುತಿಸಿದರು.
"ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ 'ಅಪರಾಧಕ್ಕೆ ಸವಾಲು' ಕನ್ನಡ ದಿನಪತ್ರಿಕೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ."
-ಡಾ. ಮುರುಗೇಶ ನಿರಾಣಿ, ಮಾಜಿ ಸಚಿವರು.
ಈ ಸಂಧರ್ಭದಲ್ಲಿ ರಾಜ್ಯ ಸಭಾ ಸದಸ್ಯ ಸಂಸದ ಈರಣ್ಣ ಕಾಡಾಡಿ, ಎಂ ಆರ್ ಎನ್ ಸಮೂಹ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.


