28.75 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಶೇಖರಿಸಿದ್ದ ₹28.75 ಕೋಟಿ ಮೌಲ್ಯದ ಎಂಡಿಎಂಎ ಹಾಗೂ ಹೈಡ್ರೋ ಗಾಂಜಾ ವಶ; ತಾಂಜಾನಿಯಾ ಹಾಗೂ ನೈಜೀರಿಯಾ ಮೂಲದ ಇಬ್ಬರು ವಿದೇಶಿ ಪೆಡ್ಲರ್‌ ಬಂಧನ.

Dec 4, 2025 - 11:32
Dec 4, 2025 - 11:44
 0
28.75 ಕೋಟಿ ಮೌಲ್ಯದ ಮಾದಕ ವಸ್ತು ವಶ


ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾರಾಟಕ್ಕೆ ಶೇಖರಿಸಲಾಗಿದ್ದ ಅಂದಾಜು ₹28.75 ಕೋಟಿ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರತ್ಯೇಕ ಮೂರು ಪ್ರಕರಣಗಳಲ್ಲಿ 10.369 ಕೆ.ಜಿ ಎಂಡಿಎಂಎ ಹಾಗೂ 8 ಕೆ.ಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದ್ದು, ತಾಂಜಾನಿಯಾ ಮೂಲದ ನ್ಯಾನ್ಸಿ ಒಮಾರಿಲಾವಾ ಹಾಗೂ ನೈಜೀರಿಯಾ ಮೂಲದ ಎಮ್ಯುನಲ್ ಅರೆಂಜಿ ಇಡಿಕೋಎಂಬವರನ್ನು ಬಂಧಿಸಲಾಗಿದೆ.

  • ಬಾಡಿಗೆ ಮನೆಯಲ್ಲಿ ವಾಸಿಸಿ ಡ್ರಗ್ ಮಾರಾಟ: ತಾಂಜಾನಿಯಾ ಮೂಲದ ನ್ಯಾನ್ಸಿ ಬಂಧನ

2023ರಲ್ಲಿ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ನ್ಯಾನ್ಸಿ, ನಂತರ ಸಂಪಿಗೆಹಳ್ಳಿಯ ಪಿ & ಟಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಹೇರ್ ಡಿಸೈನರ್ ಕೆಲಸ ಮಾಡುತ್ತಿದ್ದಳು. ದೆಹಲಿ ಮತ್ತಿತರ ನಗರಗಳಿಂದ ಎಂಡಿಎಂಎ ಕ್ರಿಸ್ಟಲ್ಸ್ಖರೀದಿಸಿ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಳು.

ಆಕೆಯಿಂದ ಅಂದಾಜು ₹18.50 ಕೋಟಿ ಮೌಲ್ಯದ 9 ಕೆ.ಜಿ 254 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಫೋನ್ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

  • ಲಾಲ್‌ಬಾಗ್ ಬಳಿ ಪೆಡ್ಲಿಂಗ್ ಯತ್ನಿಸುತ್ತಿದ್ದ ನೈಜೀರಿಯಾ ವ್ಯಕ್ತಿ ಸೆರೆ

ಲಾಲ್‌ಬಾಗ್ ಸೌತ್ ಗೇಟ್‌ನ ಬಾಸ್ಕೆಟ್‌ಬಾಲ್ ಕೋರ್ಟ್ ಬಳಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸುತ್ತಿದ್ದ ಎಮ್ಯುನಲ್ ಅರೆಂಜಿ ಇಡಿಕೋನನ್ನು ಬಂಧಿಸಲಾಗಿದೆ.

2021ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ದೆಹಲಿಗೆ ಬಂದಿದ್ದ ಆತ, 2022ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದ.

ದೆಹಲಿ ಮತ್ತು ಗೋವಾದ ವಿದೇಶಿ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್ ಖರೀದಿಸಿ, ಬೆಂಗಳೂರಿನಲ್ಲಿ ಮತ್ತೊಬ್ಬ ವಿದೇಶಿ ಮೂಲಕ ಮಾರಾಟ ಮಾಡಿಸುತ್ತಿದ್ದಾನೆಂದು ಸಿಸಿಬಿ ತಿಳಿಸಿದೆ.

ಬಂಧಿತನ ಬಳಿಯಿಂದ ₹2.25 ಕೋಟಿ ಮೌಲ್ಯದ 1 ಕೆ.ಜಿ 115 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಅಪರಾಧದಲ್ಲಿ ಬಳಸುತ್ತಿದ್ದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. 2024ರ ಫೆಬ್ರವರಿಯಲ್ಲಿ ಗೋವಿಂದಪುರ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಾಗಿತ್ತು.

  • ಫಾರಿನ್ ಪೋಸ್ಟ್ ಆಫೀಸ್‌ಗೆ ಬಂದಿದ್ದ ಪಾರ್ಸೆಲ್‌ಗಳಲ್ಲಿ 8 ಕೆ.ಜಿ ಹೈಡ್ರೋ ಗಾಂಜಾ ಜಪ್ತಿ

ವಿದೇಶದಿಂದ ಕಳುಹಿಸಲಾದ ಪಾರ್ಸೆಲ್‌ಗಳಲ್ಲಿ ಒಟ್ಟೂ ₹8 ಕೋಟಿ ಮೌಲ್ಯದ 8 ಕೆ.ಜಿ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಪ್ಯಾಕ್ ಮಾಡಿ ಬೆಂಗಳೂರಿಗೆ ಕಳುಹಿಸಲಾಗಿದ್ದ ಈ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಪೊಲೀಸರ ಪ್ರಕಾರ ಹೈಡ್ರೋ ಗಾಂಜಾ ವಿದೇಶಿ ಮೂಲಗಳಿಂದ ಖರೀದಿಸಲಾಗಿದೆ. ಸೂಕ್ಷ್ಮವಾಗಿ ಪ್ಯಾಕ್ ಮಾಡಿ ಪೋಸ್ಟ್ ಮೂಲಕ ಕಳುಹಿಸಲಾಗಿದೆ. ಆರ್ಡರ್ ಮಾಡಿದವರ ವಿವರಗಳನ್ನು ಈಗ ಸಂಗ್ರಹಿಸಲಾಗುತ್ತಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.