ಗೆಳತಿಯೊಂದಿಗೆ ಲಿವಿಂಗ್ ಟುಗೆದರ್ ನಡೆಸಲು ಕಳ್ಳತನ ಸುಲಿಗೆ ಓರ್ವನ ಬಂಧನ
Man arrested for theft, extortion to live together with girlfriend
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕಲಬುರಗಿ: ಗೆಳತಿಯೊಂದಿಗೆ ಲಿವಿಂಗ್ ಟುಗೆದರ್ ಜೀವನ ನಡೆಸಲು, ಹಾಗೂ ತನ್ನ ಮತ್ತು ಆಕೆಯ ಶೋಕಿ ಆಸೆಗಳನ್ನು ತೀರಿಸಿಕೊಳ್ಳಲು ಕಳ್ಳತನ–ಸುಲಿಗೆಗಳಲ್ಲಿ ತೊಡಗಿದ್ದ ಯುವಕನನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಸುಲಿಗೆ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ಬಂಧನವಾದ ಬಳಿಕ ನಡೆಸಿದ ವಿಚಾರಣೆಯಲ್ಲಿ ಆತ ಈ ರೀತಿಯ ಅನೇಕ ಕೃತ್ಯಗಳನ್ನು ಎಸಗಿದ್ದ ಮಾಹಿತಿ ಬೆಳಕಿಗೆ ಬಂದಿದೆ.
ಮನೆಗಳ್ಳತನಕ್ಕೆ ಕೈ ಹಾಕಿದ ಆರೋಪಿ ಬಂಧನ
ಅಫಜಲಪುರದ ಕಲ್ಲಪ್ಪ ಅಲಿಯಾಸ್ ಸಂಜು ಪೂಜಾರಿ (24) ಬಂಧಿತ ಆರೋಪಿ. ಲಿವಿಂಗ್ ಟುಗೆದರ್‌ನಲ್ಲಿ ವಾಸಿಸುತ್ತಿದ್ದ ಈತ ಕೂಲಿ ಕೆಲಸ ಮಾಡುತ್ತಿದ್ದರೂ ಮನೆ ಖರ್ಚು ಹಾಗೂ ವೈಯಕ್ತಿಕ ಖರ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಪರ್ಸ್ ಕಳವಿನಿಂದ ಹಿಡಿದು ಮನೆಗಳ ಕಳ್ಳತನಗೇ ಇಳಿದಿದ್ದಾನೆಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.
ಭರ್ಜರಿ ಆಪರೇಷನ್: ಸುಲಿಗೆಕೋರ ಇಬ್ಬರು ಸೆರೆ, ₹7.62 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ವಶ
ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ಸುಲಿಗೆಕೋರರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹7.62 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಕಲ್ಲಪ್ಪ ಅಲಿಯಾಸ್ ಸಂಜು ಪೂಜಾರಿ (24), ಸಂತೋಷ್ ಪೂಜಾರಿ (30), ವಿಜಯಪುರ ಮೂಲದವರು ಬಂಧಿತರು.
ಇವರಿಬ್ಬರೂ ಸೇರಿ ನವೆಂಬರ್ 22ರಂದು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಸುನಿತಾ ಎಂಬ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಕೊರಳಲ್ಲಿದ್ದ 3 ಗ್ರಾಂ ಚಿನ್ನದ ಮಂಗಳಸೂತ್ರ ಕಿತ್ತು ಪರಾರಿಯಾಗಿದ್ದರು.
ಪ್ರಕರಣ ದಾಖಲಾದ ನಂತರ ಇನ್ಸ್‌ಪೆಕ್ಟರ್ ಚಂದ್ರಶೇಖರ ತಿಗಡಿ ಹಾಗೂ ತಂಡ ನಡೆಸಿದ ಚುರುಕಾದ ಕಾರ್ಯಾಚರಣೆ ಮೂಲಕ ಇಬ್ಬರನ್ನೂ ಬಂಧಿಸಲಾಗಿದೆ.
- ಆರೋಪಿ ವಿರುದ್ಧ ಒಟ್ಟು ಆರು ಪ್ರಕರಣಗಳು
ವಿಚಾರಣೆಯಲ್ಲಿ ಕಲ್ಲಪ್ಪ, ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯಲ್ಲಿ ಐದು ಮನೆಗಳ್ಳತನಗಳನ್ನು ಎಸಗಿರುವುದು ಬಹಿರಂಗವಾಗಿದೆ. 5 ಮನೆಗಳ್ಳತನ ಪ್ರಕರಣಗಳು, 1 ಸುಲಿಗೆ ಪ್ರಕರಣ ದಾಖಲಾಗಿದ್ದು, ಸಂತೋಷ್ ಮೇಲೂ ಒಂದು ಸುಲಿಗೆ ಪ್ರಕರಣ ದಾಖಲಾಗಿದೆ.
ಬಂಧಿತರಿಂದ ಒಟ್ಟು: 61 ಗ್ರಾಂ ಚಿನ್ನ, 680 ಗ್ರಾಂ ಬೆಳ್ಳಿ ಆಭರಣ, ₹7,62,400 ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.


