ಸಿನಿಮಾ ಪತ್ರಕರ್ತ ಎಸ್. ಜಗದೀಶ್ ಕುಮಾರ್‌ಗೆ ದ್ವಾರಕೀಶ್ ಸ್ಮಾರಕ ಪ್ರಶಸ್ತಿ ಪ್ರದಾನ
ಸಿನಿಮಾ ಪತ್ರಕರ್ತ ಎಸ್. ಜಗದೀಶ್ ಕುಮಾರ್ ಅವರಿಗೆ ಈ ಸಾಲಿನ ‘ದ್ವಾರಕೀಶ್ ಸ್ಮಾರಕ ಪ್ರಶಸ್ತಿ’ ಬೀದರ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಲಾಯಿತು. ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದ ಬಗ್ಗೆ ನಿಷ್ಠೆಯಿಂದ ವರದಿ ಮಾಡಿರುವ ಅವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಟಿವಿ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಅವರು, ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೀದರ್ : ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಕಳೆದ ಮೂರು ದಶಕಗಳಿಂದ ನಿಕಟವಾಗಿ ಗಮನಿಸುತ್ತಾ, ಬೆಳ್ಳಿತೆರೆಯ ಹಿಂದಿನ ಕಥೆಗಳನ್ನು ಜನರಿಗೆ ಪರಿಚಯಿಸುತ್ತಾ ಬಂದಿರುವ ಹಿರಿಯ ಸಿನಿಮಾ ಪತ್ರಕರ್ತ ಎಸ್. ಜಗದೀಶ್ ಕುಮಾರ್ ಅವರಿಗೆ ಈ ಸಾಲಿನ ‘ದ್ವಾರಕೀಶ್ ಸ್ಮಾರಕ ಪ್ರಶಸ್ತಿ’ ಲಭಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಪತ್ರಕರ್ತರ ಮಹಾ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಆರ್. ಅಶೋಕ್ ಹಾಗೂ ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಗೊಂಡಿದ್ದು, ಸಿನಿಮಾ ಪತ್ರಿಕೋದ್ಯಮದಲ್ಲಿ ಅವರ ಬದ್ಧತೆಗೆ ಸಂದ ಗೌರವವಾಗಿದೆ.
ದೃಶ್ಯ ಮಾಧ್ಯಮದ ಉತ್ತುಂಗದ ಅವಧಿಯಲ್ಲಿ ಟಿವಿ, ಉದಯ ಮತ್ತು ಕಸ್ತೂರಿ ವಾಹಿನಿಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಜಗದೀಶ್ ಅವರದ್ದು. ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’, ‘ಹೃದಯದಿಂದ’, ‘ಕಾಮಿಡಿ ಟೈಮ್’ ಹಾಗೂ ‘ಸಕತ್ ಸಿನಿಮಾ’ ಮೊದಲಾದ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. ಲೈವ್ ಶೋಗಳು ಹಾಗೂ ಭಾರೀ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮಗಳಲ್ಲೂ ಅವರ ಸಂಘಟನಾ ಕೌಶಲ್ಯ ಗಮನಾರ್ಹವಾಗಿದೆ.
ಮುದ್ರಣ ಮಾಧ್ಯಮದಲ್ಲಿ ‘ಈ ಸಂಜೆ’ ಪತ್ರಿಕೆಯ ಮೂಲಕ ದೀರ್ಘಕಾಲ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ‘ಸಿನಿ ಸುದ್ದಿ’ ವೆಬ್ ಪೋರ್ಟಲ್ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್, ವಾಣಿಜ್ಯ ಮಂಡಳಿಯ ವಿತರಕರ ವಲಯದಲ್ಲೂ ಸಕ್ರಿಯರಾಗಿದ್ದಾರೆ. ಕಲಾವಿದರು, ನಿರ್ಮಾಪಕರು ಮತ್ತು ತಂತ್ರಜ್ಞರ ನಡುವೆ ಸೇತುವೆಯಂತಿರುವ ಅವರಿಗೆ ಕುಳ್ಳ ದ್ವಾರಕೀಶ್ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ಚಿತ್ರರಂಗದ ಹಿತೈಷಿಗಳಲ್ಲಿ ಸಂತಸ ಮೂಡಿಸಿದೆ.
ಮೂರು ದಶಕಗಳ ಕಾಲ ಚಿತ್ರರಂಗದ ಏಳುಬೀಳುಗಳನ್ನು ಆಪ್ತವಾಗಿ ದಾಖಲಿಸಿರುವ ಜಗದೀಶ್ ಅವರಿಗೆ ಈ ಗೌರವ ಅತ್ಯಂತ ಸೂಕ್ತವೆಂದು ಅಭಿಪ್ರಾಯ ವ್ಯಕ್ತವಾಗಿದೆ.


