ಪೊಲೀಸ್ ಸಿಬ್ಬಂದಿಗಳಿಗೆ ಕಠಿಣ ಶಿಸ್ತುಕ್ರಮದ ಎಚ್ಚರಿಕೆ ನೀಡಿದ ಡಿಜಿ & ಐಜಿಪಿ

DG & IGP warn of strict disciplinary action against police personnel

Dec 6, 2025 - 15:04
Dec 6, 2025 - 15:05
 0
ಪೊಲೀಸ್ ಸಿಬ್ಬಂದಿಗಳಿಗೆ ಕಠಿಣ ಶಿಸ್ತುಕ್ರಮದ ಎಚ್ಚರಿಕೆ ನೀಡಿದ ಡಿಜಿ & ಐಜಿಪಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯೇ ದರೋಡೆ, ಕಳ್ಳತನ ಹಾಗೂ ವಂಚನೆಗಳಂತಹ ಅಪರಾಧಗಳಲ್ಲಿ ತೊಡಗಿರುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಡಿಜಿ & ಐಜಿಪಿ ಡಾ. ಎಂ.ಎ. ಸಲೀಂ ಅವರು ಕಟ್ಟುನಿಟ್ಟಿನ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸಾರ್ಹತೆ ಕುಗ್ಗಿಸುವ ಇಂತಹ ಪ್ರವೃತ್ತಿಗಳು ಇಲಾಖೆಗೆ ಅಪಕೀರ್ತಿಯನ್ನುಂಟು ಮಾಡುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಪರಾಧಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಹೆಸರು ಕೇಳಿಬರುವುದು ಗಂಭೀರ ವಿಚಾರವಾಗಿದ್ದು, ಇಲಾಖೆಯ ಘನತೆ ಮತ್ತು ನಂಬಿಕೆ ಕುಸಿಯುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.

ಘಟಕಾಧಿಕಾರಿಗಳಿಗೆ ನೀಡಲಾದ ಸೂಚನೆಗಳು

1. ಘಟಕದ ಎಲ್ಲಾ ಅಧಿಕಾರಿಗಳು ತಮ್ಮ ಅಧೀನದ ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಯ ಪೂರ್ವಾಪರ ಪರಿಶೀಲನೆ ಹಾಗೂ ಸಮಗ್ರತೆಯ ಮೌಲ್ಯಮಾಪನಗಳನ್ನು ನಿಯಮಿತವಾಗಿ ನಡೆಸಬೇಕು.

2. ನೈತಿಕ ಮಾನದಂಡಗಳು, ಕಾನೂನುಬದ್ಧ ಕರ್ತವ್ಯಗಳು ಮತ್ತು ಭ್ರಷ್ಟಾಚಾರ/ಅಪರಾಧಗಳ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

3. ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಯ ದುರ್ವರ್ತನೆ, ಅಕ್ರಮ ಚಟುವಟಿಕೆಗಳು, ಅಪರಾಧಿಕ ಕೃತ್ಯಗಳಲ್ಲಿ ತೊಡಗಿರುವ ಮಾಹಿತಿ ದೊರೆತರೆ ತಕ್ಷಣವೇ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಬೇಕು.

4. ಇಲಾಖೆಯ ಘನತೆ ಕಾಪಾಡುವ ಹೊಣೆಗಾರಿಕೆ ಹಾಗೂ ಸಮಗ್ರತೆಯ ಸಂಸ್ಕೃತಿ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮೂಹಿಕ ಹೊಣೆಗಾರಿಕೆಯಾಗಿದೆ.

5. ಸಿಬ್ಬಂದಿಯ ಮನೋಬಲ ಕುಗ್ಗುವಿಕೆ ಅಥವಾ ನೈತಿಕ ಲೋಪಕ್ಕೆ ಕಾರಣವಾಗುವ ಅಂಶಗಳಿಗೆ ಸೂಕ್ತ ಸ್ಪಂದನೆ, ಮಾರ್ಗದರ್ಶನ ಹಾಗೂ ಸಲಹಾ ಕಾರ್ಯಕ್ರಮಗಳನ್ನು ಒದಗಿಸಬೇಕು.

6. ಪ್ರಸ್ತುತ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಹಾಗೂ ಯಾವುದೇ ಅಡ್ಡದಾರಿಗಳಿಗೆ ಅವಕಾಶ ನೀಡಬಾರದು.

7. ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಎಲ್ಲಾ ಅಧಿಕಾರಿ–ಸಿಬ್ಬಂದಿಯೂ ಕಾನೂನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

8. “ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಯಲ್ಲಿ ಯಾವುದೇ ರೀತಿಯ ರಾಜಿ ಇಲ್ಲ” ಎಂದು ಡಿಜಿ & ಐಜಿಪಿ ಸಲೀಂ ಅವರು ಪತ್ರದ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.