ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್–ಜೀಪ್ ಮುಖಾಮುಖಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಕಲಬುರಗಿ–ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಜೀಪ್ ಮುಖಾಮುಖಿ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಕೆಆರ್‌ಟಿಸಿ ಅಧ್ಯಕ್ಷರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Dec 12, 2025 - 02:09
Dec 12, 2025 - 09:21
 0
ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್–ಜೀಪ್ ಮುಖಾಮುಖಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಕಲಬುರಗಿ: ಕಲಬುರಗಿ–ಅಫಜಲಪುರ ರಾಷ್ಟ್ರೀಯ ಹೆದ್ದಾರಿ ಮಾದರಿ ರಸ್ತೆಯಲ್ಲಿ ಸಾರಿಗೆ ಬಸ್ ಹಾಗೂ ಜೀಪ್ ನಡುವೆ ಗುರುವಾರ ಬೆಳಿಗ್ಗೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಅಫಜಲಪುರ ತಾಲೂಕಿನ ತೆಲ್ಲೋಣಿ ಗ್ರಾಮದ ನಿವಾಸಿಗಳಾದ ಚಂದ್ರಕಾಂತ ಚಿತ್ತಾಪುರ, ಸುಲೋಚನಾ ಚಿತ್ತಾಪುರ, ಮಿಟ್ಟುಸಾಬ ರಸೂಲ್ ಪಟೇಲ್ ಈ ಅಪಘಾತದಲ್ಲಿ ಮೃತರಾದವರು ಎಂದು ಗುರುತಿಸಿಲಾಗಿದೆ.

  • ಅಪಘಾತ ಹೇಗೆ ಸಂಭವಿಸಿತು?

ಕಲಬುರಗಿಯಿಂದ ಅಫಜಲಪುರ ಕಡೆಗೆ ಹೊರಟಿದ್ದ ಸಾರಿಗೆ ಬಸ್, ಅಫಜಲಪುರದಿಂದ ಕಲಬುರಗಿಯತ್ತ ಬರುತ್ತಿದ್ದ ಜೀಪ್ಅನ್ನು ಎದುರುಮುಖವಾಗಿ ಢಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಗಾಯಗೊಂಡಿರುವ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ಕುರಿತು ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಮಿಷನರ್ ಶರಣಪ್ಪ ಎಸ್‌ಡಿ ಸ್ಥಳ ಪರಿಶೀಲನೆ

ಅಪಘಾತದ ಮಾಹಿತಿ ಸಿಗುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌ಡಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಇದಕ್ಕೂ ಮುನ್ನ ಸಂಚಾರಿ ಠಾಣೆಯ ಎಸಿಪಿ ಸುಧಾ ಆದಿ, ಇನ್‌ಸ್ಪೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಿದರು.

  • ಮೃತರಿಗೆ ಕೆಕೆಆರ್‌ಟಿಸಿಯಿಂದ ಸಂತಾಪ –ಗಾಯಾಳುಗಳಿಗೆ ನೆರವಿನ ಭರವಸೆ

ಭೀಕರ ಅಪಘಾತದ ನಂತರ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್ ಸಂತಾಪ ಸೂಚಿಸಿದರು. ಮೂರುಮಂದಿ ಸಾವನ್ನಪ್ಪಿರುವುದು ಅತ್ಯಂತ ವಿಷಾದನೀಯ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ. ಕುಟುಂಬ ಸದಸ್ಯರಿಗೆ ದುಃಖವನ್ನುತಡೆದುಕೊಳ್ಳುವ ಶಕ್ತಿ ದೊರಕಲಿ ಎಂದು ತಿಳಿಸಿದ್ದಾರೆ. ಗಾಯಗೊಂಡವರಿಗೆ ಅಗತ್ಯವಾದ ಎಲ್ಲಾ ಚಿಕಿತ್ಸೆ ಹಾಗೂ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.